ಅಯೋಧ್ಯೆ ವಿವಾದ: 1993ರ ಕೇಂದ್ರ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

Update: 2019-02-15 18:13 GMT

ಹೊಸದಿಲ್ಲಿ, ಫೆ.15: ಅಯೋಧ್ಯೆಯಲ್ಲಿರುವ ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ಸೇರಿದಂತೆ ಒಟ್ಟು 67.703 ಎಕ್ರೆ ಜಮೀನನ್ನು ಸರಕಾರ ಸ್ವಾಧೀನಪಡಿಸಲು ಆಧಾರವಾಗಿರುವ 1993ರ ಕೇಂದ್ರ ಕಾನೂನಿ(ಸೆಂಟ್ರಲ್ ಲಾ)ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರ್ಧರಿಸಿದೆ.

 ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ಈ ಅರ್ಜಿಯನ್ನು ಅಯೋಧ್ಯೆ ವಿವಾದದ ಕುರಿತು ವಿಚಾರಣೆ ಬಾಕಿ ಇರುವ ಮುಖ್ಯ ಅರ್ಜಿಯ ಜೊತೆ ಲಗತ್ತಿಸಿದೆ.

ಅಯೋಧ್ಯೆಯ ವಿವಾದಿತ ಜಮೀನನ್ನು ಹೊರತುಪಡಿಸಿ, ಉಳಿದ 67 ಎಕರೆ ಜಮೀನನ್ನು ಮೂಲ ಮಾಲಕರಿಗೆ ಮರಳಿಸಲು ಅನುಕೂಲವಾಗುವಂತೆ ಸುಪ್ರೀಂ ಕೋರ್ಟ್‌ನ 2003ರ ಆದೇಶದಲ್ಲಿ ಮಾರ್ಪಾಡು ಕೋರಿ ಕೇಂದ್ರ ಸರಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿದ ವಾರದ ಬಳಿಕ ಈ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಲಕ್ನೋ ಮೂಲದ ಇಬ್ಬರು ವಕೀಲರ ಸಹಿತ , ರಾಮಲಲ್ಲಾನ ಭಕ್ತರೆಂದು ಹೇಳಿಕೊಂಡಿರುವ 7 ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಯಲ್ಲಿ, ರಾಜ್ಯಕ್ಕೆ ಸೇರಿದ ಜಮೀನನ್ನು ವಶಕ್ಕೆ ಪಡೆಯಲು ಸಂಸತ್‌ಗೆ ಯಾವುದೇ ಶಾಸಕಾಂಗ ಅಧಿಕಾರವಿಲ್ಲ ಮತ್ತು ರಾಜ್ಯದ ವ್ಯಾಪ್ತಿಗೆ ಸೇರಿರುವ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಹಣೆಯ ವಿಷಯದಲ್ಲಿ ರಾಜ್ಯ ಶಾಸಕಾಂಗಕ್ಕೆ ಯಾವುದೇ ವಿಶೇಷಾಧಿಕಾರವಿಲ್ಲ ಎಂದು ತಿಳಿಸಲಾಗಿದೆ.

ಅಲ್ಲದೆ ಈ ಕ್ರಮವು, ಸಂವಿಧಾನದ 25ನೇ ವಿಧಿಯಡಿ ಖಾತರಿಗೊಳಿಸಲಾಗಿರುವ ಹಿಂದುಗಳ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ . ಅಲ್ಲದೆ ಇದು 67.703 ಎಕರೆ ಪ್ರದೇಶದೊಳಗಿರುವ , ಅದರಲ್ಲೂ ನಿರ್ದಿಷ್ಟವಾಗಿ ಶ್ರೀರಾಮ ಜನ್ಮಭೂಮಿ ನ್ಯಾಸ, ಮಾನಸ ಭವನ, ಸಂಕಟ ಮೋಚನ ಮಂದಿರ, ರಾಮ ಜನ್ಮಸ್ಥಾನ ಮಂದಿರ, ಜಾನಕಿ ಮಹಲ್ ಮತ್ತು ಕಥಾ ಮಂಟಪಕ್ಕೆ ಸೇರಿದ ಪ್ರಾರ್ಥನಾ ಸ್ಥಳದಲ್ಲಿ ನಡೆಯುವ ಪೂಜೆ, ದರ್ಶನ ಹಾಗೂ ಧಾರ್ಮಿಕ ವಿಧಿಯಲ್ಲಿ ಕೇಂದ್ರ ಮತ್ತು ಉತ್ತರಪ್ರದೇಶ ಸರಕಾರದ ಹಸ್ತಕ್ಷೇಪವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News