ಮಂಗಳೂರು: ಮಾಸ್ಕೋ ಗ್ರಾಂಡ್ಯೂರ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

Update: 2019-02-16 08:01 GMT

ಮಂಗಳೂರು, ಫೆ.16: ಮಾಸ್ಕೋ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ವತಿಯಿಂದ ನಗರದ ಪಾಂಡೇಶ್ವರದ ಸುಭಾಶ್ ನಗರದಲ್ಲಿ ನಿರ್ಮಾಣಗೊಳ್ಳಲಿರುವ ‘ಮಾಸ್ಕೋ ಗ್ರಾಂಡ್ಯೂರ್’ ವಸತಿ ಸಮುಚ್ಚಯಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿತು.

ನೂತನ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಸತಿ ಸಮುಚ್ಚಯದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಏಕಗವಾಕ್ಷಿ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು. ಈ ಯೋಜನೆಗೆ ಮುಖ್ಯಮಂತ್ರಿ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಮಾದರಿ ನಗರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ನಗರದ ಸೌಂದರ್ಯ ಮತ್ತು ಬೆಳವಣಿಗೆಗೆ ಕಾರಣವಾಗುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಕಟ್ಟಡಗಳು ನಿರ್ಮಾಣವಾಗುವಂತಾಗಲಿ ಎಂದು ಸಚಿವರು ಹಾರೈಸಿದರು. 

ಎಂಎಎಸ್ ಗುಣಮಟ್ಟದ, ಆಕರ್ಷಕ ವಿನ್ಯಾಸಗಳ ಹಾಗೂ ಸಕಲ ಸೌಕರ್ಯಗಳನ್ನೊಳಗೊಂಡ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ‘ಮಾಸ್ಕೋ ಗ್ರಾಂಡ್ಯೂರ್’ ವಸತಿ ಸಮುಚ್ಚಯವನ್ನು ಇದೇರೀತಿ ಗುಣಮಟ್ಟದಲ್ಲಿ ಸಂಸ್ಥೆ ನಿರ್ಮಿಸಲಿದೆ ಎಂಬ ವಿಶ್ವಾಸ ತನಗಿದೆ ಎಂದರು.

ಐದು ಮಹಡಿಗಳಲ್ಲಿ 25 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ‘ಮಾಸ್ಕೋ ಗ್ರಾಂಡ್ಯೂರ್’ ವಸತಿ ಸಮುಚ್ಚಯವು ಎಲ್ಲಾ ನಾಗರಿಕ ಸೌಕರ್ಯಗಳನ್ನು ಹೊಂದಿರುವ ಸುಂದರ ಪರಿಸರದಲ್ಲಿ ಆಧುನಿಕ ವಸತಿ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಡಾ.ಹಬೀಬ್ ರಹ್ಮಾನ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಹಾಗೂ ಉದ್ಯಮಿ ಎಸ್.ಎಂ.ರಶೀದ್ ಹಾಜಿ, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಉದ್ಯಮಿ ಅಬ್ದುರ್ರವೂಫ್ ಪುತ್ತಿಗೆ, ಮಾಸ್ಕೋ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ನ ಪಾಲುದಾರರಾದ ಅಬ್ದುಲ್ಲಾ ಮೋನು, ಅಬ್ದುರ್ರಶೀದ್, ಯು.ಟಿ.ಅಹ್ಮದ್ ಶರೀಫ್, ಮುಖ್ತಾರ್, ಆರ್ಕಿಟೆಕ್ಟ್ ವೆಂಕಟೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ರಹಿಮಾನ್ ಕಿರಾಅತ್ ಪಠಿಸಿದರು. ಸಿದ್ದೀಕ್ ಬ್ಯಾರಿ ಸ್ವಾಗತಿಸಿದರು. ಎಸ್.ಎಂ.ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಕಾಶ್ಮೆರದಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News