ಪರಿಹಾರ ನೀಡದಿದ್ದರೆ ಕಾನೂನು ಹೋರಾಟ: ಶಂಕರ ಪೂಜಾರಿ

Update: 2019-02-16 13:05 GMT

ಉಡುಪಿ, ಫೆ.16: ‘ನನ್ನ ಬಂಧನಕ್ಕೆ ಕಾರಣರಾದವರು ನನಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪೊಲೀಸ್ ದೂರು ನೀಡಿ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಕುವೈತ್ ಜೈಲಿನಲ್ಲಿ ಬಂಧಿಯಾಗಿ ಇದೀಗ ಬಿಡುಗಡೆಗೊಂಡು ಊರಿಗೆ ಮರಳಿರುವ ಕುಂದಾಪುರ ತಾಲೂಕಿನ ಬಸ್ರೂರಿನ ಶಂಕರ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಮುಬಾರಕ್ ನೀಡಿದ ನಿಷೇಧಿತ ಔಷಧಿಯನ್ನು ತೆಗೆದುಕೊಂಡು ಹೋದ ಪರಿಣಾಮ ನಾನು ಏಳು ತಿಂಗಳ ಕಾಲ ಕುವೈತ್ ನಲ್ಲಿ ಜೈಲುವಾಸ ಅನುಭವಿಸಬೇಕಾಯಿತು. ಅಲ್ಲದೆ ನನ್ನ ಉದ್ಯೋಗವನ್ನು ಕೂಡ ಕಳೆದುಕೊಂಡಿ ದ್ದೇನೆ. ಕಂಪೆನಿಯಲ್ಲಿ ಐದು ವರ್ಷಗಳ ದುಡಿದರೂ ಯಾವುದೇ ಪರಿಹಾರ ಸಿಗದೆ ಬರಿಗೈಯಲ್ಲಿ ವಾಪಾಸ್ಸಾಗಿದ್ದೇನೆ ಎಂದರು.

ಏಳು ತಿಂಗಳ ಕಾಲ ಜೈಲಿನಲ್ಲಿ ಅನುಭವಿಸಿದ ಮಾನಸಿಕ ಹಿಂಸೆ, ಈ ಸಮಯ ದಲ್ಲಿ ಆದಾಯ ಇಲ್ಲದೆ ಪತ್ನಿ, ಮಕ್ಕಳು ಅನುಭವಿಸಿದ ಕಷ್ಟ, ಕಳೆದುಕೊಂಡ ಜೀವನಾಧಾರವಾಗಿದ್ದ ಉದ್ಯೋಗ ಇವುಗಳಿಗೆ ಕಾರಣವಾದ ಉಡುಪಿಯ ಮುಬಾರಕ್ ನಾನು ಬಿಡುಗಡೆಗೊಂಡು ಊರಿಗೆ ಮರಳಿ ತಿಂಗಳಾದರೂ ಸೌಜನ್ಯಕ್ಕೂ ನನ್ನನ್ನು ಭೇಟಿ ಮಾಡಿಲ್ಲ. ನನಗೆ ಆಗಿರುವ ನಷ್ಟಕ್ಕೆ ಮುಬಾರಕ್ ಪರಿಹಾರ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ನನ್ನ ಬಿಡುಗಡೆಗೆ ಸುಮಾರು ಆರು ಲಕ್ಷ ರೂ.ವರೆಗೆ ವೆಚ್ಚವಾಗಿದೆ. ಇದಕ್ಕಾಗಿ ಶ್ರಮಿಸಿರುವ ಕುವೈತ್ ನ ತುಳುಕೂಟ, ಬಿಲ್ಲವ ಸಂಘ, ಸಮಾಜ ಸೇವಕರು, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾಡಳಿತಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜ್ಯೋತಿ ಶಂಕರ ಪೂಜಾರಿ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಮುಖಂಡರಾದ ಸುಧೀರ್ ಪೂಜಾರಿ, ಸುನೀಲ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News