ಉಗ್ರ ಗುಂಪುಗಳ ನಿಧಿಗಳನ್ನು ವಿಳಂಬವಿಲ್ಲದೆ ಮುಟ್ಟುಗೋಲು ಹಾಕಿ

Update: 2019-02-16 16:13 GMT

ವಾಶಿಂಗ್ಟನ್, ಫೆ. 16: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿರುವ ಗುಂಪುಗಳು ಮತ್ತು ಅವುಗಳ ನಾಯಕರ ನಿಧಿಗಳು ಮತ್ತು ಇತರ ಹಣಕಾಸು ಸೊತ್ತುಗಳನ್ನು ವಿಳಂಬವಿಲ್ಲದೆ ಸ್ಥಗಿತಗೊಳಿಸುವಂತೆ ಅಮೆರಿಕ ಶುಕ್ರವಾರ ಪಾಕಿಸ್ತಾನವನ್ನು ಒತ್ತಾಯಿಸಿದೆ.

ನಿಷೇಧಿತ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯು ಮತ್ತೆ ದಾಳಿ ನಡೆಸದಂತೆ ತಡೆಯಲು ತೆಗೆದುಕೊಳ್ಳಲಾಗುವ ಕ್ರಮಗಳನ್ನು ತಾನು ಸಂಪೂರ್ಣವಾಗಿ ಬೆಂಬಲಿಸುವುದಾಗಿಯೂ ಅಮೆರಿಕ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಭಯೋತ್ಪಾದಕರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 40 ಸಿಆರ್‌ ಪಿಎಫ್ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ವಹಿಸಿಕೊಂಡಿದೆ.

‘‘ಪಾಕಿಸ್ತಾನವು ಜೈಶೆ ಮುಹಮ್ಮದ್ ಸಂಘಟನೆಯನ್ನು 2002ರಲ್ಲಿ ನಿಷೇಧಿಸಿದೆ. ಆದಾಗ್ಯೂ, ಅದು ಪಾಕಿಸ್ತಾನದಲ್ಲಿ ಈಗಲೂ ಸಕ್ರಿಯವಾಗಿದೆ. ಈ ಭಯೋತ್ಪಾದಕ ಸಂಘಟನೆಯನ್ನು ಅಮೆರಿಕವು 2001 ಡಿಸೆಂಬರ್‌ನಲ್ಲಿ ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂಬುದಾಗಿ ಘೋಷಿಸಿದೆ. ಭವಿಷ್ಯದಲ್ಲಿ ಅದು ದಾಳಿಗಳನ್ನು ನಡೆಸುವುದನ್ನು ತಡೆಯಲು ತೆಗೆದುಕೊಳ್ಳಲಾಗುವ ಕ್ರಮಗಳನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದರು.

ಇದಕ್ಕೆ ಹೆಚ್ಚುವರಿಯಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜೈಶೆ ಮುಹಮ್ಮದನ್ನು 2001ರಲ್ಲಿ ‘1267 ಐಸಿಲ್ (ಡೇಯಿಶ್) ಮತ್ತು ಅಲ್-ಖಾಯ್ದ ನಿಷೇಧ ಪಟ್ಟಿ’ಗೆ ಸೇರಿಸಿದೆ ಎಂದು ಅವರು ತಿಳಿಸಿದರು.

►ಪಾಕಿಸ್ತಾನ ತನ್ನ ಬದ್ಧತೆ ನಿಭಾಯಿಸಲಿ

‘‘ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ, ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ತಾಣವನ್ನು ನೀಡುವುದನ್ನು ನಿಲ್ಲಿಸಬೇಕು ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿಷೇಧ ಪಟ್ಟಿಯಲ್ಲಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ನಿಧಿಗಳು ಮತ್ತು ಇತರ ಹಣಕಾಸು ಸೊತ್ತುಗಳನ್ನು ವಿಳಂಬವಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಮೂಲಕ ಅದು ತನ್ನ ವಿಶ್ವಸಂಸ್ಥೆಯ ಬದ್ಧತೆಯನ್ನು ನಿಭಾಯಿಸಬೇಕು’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಕ್ತಾರರು ತಿಳಿಸಿದರು.

►ಭಾರತದ ಆತ್ಮರಕ್ಷಣೆಯ ಹಕ್ಕಿಗೆ ಸಂಪೂರ್ಣ ಬೆಂಬಲ: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ

ಆತ್ಮರಕ್ಷಣೆಯ ಭಾರತದ ಹಕ್ಕನ್ನು ಅಮೆರಿಕ ಬೆಂಬಲಿಸುತ್ತದೆ ಎಂಬ ಭರವಸೆಯನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಶುಕ್ರವಾರ ನೀಡಿದ್ದಾರೆ.

ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ದಾಳಿಯನ್ನು ಖಂಡಿಸಲು ಹಾಗೂ ಸಾಂತ್ವನ ಹೇಳಲು ಶುಕ್ರವಾರ ಬೆಳಗ್ಗೆ ದೋವಲ್‌ಗೆ ಫೋನ್ ಮಾಡಿದ್ದ ವೇಳೆ ಬೋಲ್ಟನ್ ಈ ಭರವಸೆಯನ್ನು ನೀಡಿದ್ದಾರೆ.

‘‘ಭಾರತದ ಆತ್ಮರಕ್ಷಣೆಯ ಹಕ್ಕನ್ನು ನಾವು ಬೆಂಬಲಿಸುತ್ತೇವೆ ಎಂದು ನಾನು ಅಜಿತ್ ದೋವಲ್‌ಗೆ ಇಂದು ಹೇಳಿದೆ. ನಾನು ಅವರೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗಾಗಿ ನಮ್ಮ ಸಂತಾಪ ವ್ಯಕ್ತಪಡಿಸಿದ್ದೇನೆ’’ ಎಂದು ಅವರು ಪಿಟಿಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News