ನಮಗೆ ಮೋದಿ ಮತ್ತು ಅವರ ಸರಕಾರದಲ್ಲಿ ನಂಬಿಕೆಯಿಲ್ಲ: ಹುತಾತ್ಮ ಯೋಧನ ಪತ್ನಿ

Update: 2019-02-16 16:40 GMT

ಹೊಸದಿಲ್ಲಿ, ಫೆ.16: ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ನಾವು ಅವರನ್ನೂ ಅವರ ಸರಕಾರವನ್ನು ನಂಬುವುದಿಲ್ಲ” ಎಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಪ್ರದೀಪ್ ಸಿಂಗ್ ರ ಪತ್ನಿ ಹೇಳಿದ್ದಾರೆ.

ಪ್ರದೀಪ್ ಸಿಂಗ್ ರ ಪತ್ನಿ ನೀರಜ್ ‘ಇಂಡಿಯಾ ಟುಡೆ’ ಜೊತೆ ಮಾತನಾಡಿದ್ದು, “ಕಾಶ್ಮೀರದಲ್ಲಿ ಈ ಹಿಂದೆಯೂ ಉಗ್ರ ದಾಳಿಗಳು ನಡೆದಿತ್ತು. ಆದರೆ ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ಏಕೆ ನೀಡಲಿಲ್ಲ. ಕಾಶ್ಮೀರದಲ್ಲಿರುವ ಕಲ್ಲುತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸೈನಿಕರಿಗೆ ಅವಕಾಶ ನೀಡಬೇಕು. ನಮಗೆ ಮೋದಿ ಮತ್ತು ಅವರ ಸರಕಾರದ ಮೇಲೆ ನಂಬಿಕೆ ಇಲ್ಲ” ಎಂದು ಹೇಳಿದರು.

“ಈ ಘಟನೆಯ ನಂತರ ಸೇನೆಯು ಉಗ್ರರ ವಿರುದ್ಧ ಕ್ರಮ ಕೈಗೊಂಡರೂ ನನ್ನ ಪತಿ ಹಿಂದಿರುಗಿ ಬರುವುದಿಲ್ಲ. 40  ದಿನಗಳ ರಜೆಯಲ್ಲಿ ಬಂದಿದ್ದ ಅವರು ಫೆಬ್ರವರಿ 11ರಂದು ಕಾಶ್ಮೀರಕ್ಕೆ ತೆರಳಿದ್ದರು” ಎಂದವರು ಹೇಳಿದರು.

ಹುತಾತ್ಮ ಯೋಧ ಪ್ರದೀಪ್ ರ ತಂದೆ ಅಮರ್ ಸಿಂಗ್ ಮಾತನಾಡಿ, “ನಮ್ಮ ಸೈನಿಕರ ಕೊಡುಗೆಗಳಿಗೆ ಸರಕಾರವು ಯಾವತ್ತೂ ಬೆಲೆ ಕೊಟ್ಟಿಲ್ಲ. ಮೂರು ದಿನಗಳಲ್ಲೇ ಜನರು ನನ್ನ ಪುತ್ರನ ಕೊಡುಗೆಯನ್ನು ಮರೆಯುತ್ತಾರೆ. ಸರಕಾರವು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೊಗಳುತ್ತಲೇ ಇದ್ದರೂ ಉಗ್ರ ಚಟುವಟಿಕೆಗಳು ನಡೆಯುತ್ತಲೇ ಇದೆ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News