ಕಾವೇರಿ ಒಡಲು ಸೇರುತ್ತಿದೆ ಕಾಫಿ ಪಲ್ಪಿಂಗ್ ತ್ಯಾಜ್ಯ !

Update: 2019-02-16 18:12 GMT

ಸಿದ್ದಾಪುರ (ಕೊಡಗು), ಫೆ.16: ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾಗಿರುವ ಕಾವೇರಿ ನದಿ ನೀರು ದಿನದಿಂದ ದಿನಕ್ಕೆ ತನ್ನ ಪಾವಿತ್ರವನ್ನು ಕಳೆದುಕೊಳ್ಳುತ್ತಿದೆ. ಕೊಳೆತ ತ್ಯಾಜ್ಯಗಳನ್ನು ನದಿ ನೀರಿಗೆ ನೇರವಾಗಿ ಸುರಿಯುವುದು, ಶೌಚಾಲಯದ ನೀರನ್ನು ನದಿಗೆ ಹರಿಯ ಬಿಡುವುದು ಒಂದೆಡೆಯಾದರೆ, ಕಾಫಿ ಪಲ್ಪಿಂಗ್ ತ್ಯಾಜ್ಯ ನೀರನ್ನು ಹಾಡಹಗಲೆ ಸಾರ್ವಜನಿಕರಿಗೆ ಗೋಚರಿಸುವಂತೆ ಕಳೆದ ಹಲವು ದಿನಗಳಿಂದ ನದಿಗೆ ಹರಿಯ ಬಿಡುತ್ತಿರುವದರಿಂದ ನದಿ ನೀರು ಕಲುಷಿತ ಗೊಳ್ಳುತ್ತಿದ್ದು, ಸಾರ್ವಜನಿಕರ ಆರೋಗ್ಯದಲ್ಲೂ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಕಾಫಿ ಪಲ್ಪಿಂಗ್ ತ್ಯಾಜ್ಯ ನೀರು ನದಿಗೆ: ಸಮೀಪದ ನೆಲ್ಯಹುದಿಕೇರಿ ಕಾವೇರಿ ಸೇತುವೆ ಪಕ್ಕದಲ್ಲಿ ಗೆದ್ದೆಗೆ ಹೊಂದಿಕೊಂಡಿರುವಂತೆ ಮಳೆ ನೀರು ನದಿಗೆ ಹರಿಯಲು ನಿರ್ಮಿಸಿರುವ ಮೋರಿಯ ಮೂಲಕ ಸಮೀಪದ ಪ್ರಭಾವಿ ವ್ಯಕ್ತಿಯೊಬ್ಬರ ಕಾಫಿ ತೋಟದ ಕಾಫಿ ಪಲ್ಪಿಂಗ್ ನೀರು ನದಿಯ ಒಡಲು ಸೇರುತ್ತಿದೆ. ಇದರಿಂದಾಗಿ ಶುದ್ಧವಾಗಿದ್ದ ಕಾವೇರಿ ಕಪ್ಪು ಬಣ್ಣ ಪಡೆಯುತ್ತಿದೆ. ಅಲ್ಲದೆ ಪರಿಸರವೆಲ್ಲ ದುರ್ನಾತ ಬೀರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಎನ್‌ಜಿಒ ವರದಿ: ನೆಲ್ಯಹುದಿಕೇರಿ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಪ್ರತಿ ವರ್ಷ ನೆಲ್ಯಹುದಿಕೇರಿ ಕಾವೇರಿ ಸೇತುವೆ ಬಳಿ ನೀರಿನ ಗುಣ ಮಟ್ಟ ಪರಿಶೋಧನೆ ಮಾಡಲು ಜಿಲ್ಲೆಯ ಎನ್‌ಜಿಒ ತಂಡವೊಂದು ಆಗಮಿಸುತ್ತಿದೆ. ಇಲ್ಲಿಯ ನೀರು ವರ್ಷದಿಂದ ವರ್ಷಕ್ಕೆ ವಿಷಯುಕ್ತವಾಗುತ್ತಿದೆ. ಅಲ್ಲದೆ ಸ್ನಾನ ಮಾಡಲೂ ಯೋಗ್ಯವಲ್ಲದ ಮಟ್ಟಕ್ಕೆ ನೀರು ಕಲುಷಿತಗೊಳ್ಳುತ್ತಿರುವ ಅಪಾಯಕಾರಿ ಅಂಶವನ್ನು ತಂಡ ಪತ್ತೆ ಹಚ್ಚಿದೆ.

ರೋಗ ಹರಡುವ ಸಾಧ್ಯತೆ: ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಮಧ್ಯದಲ್ಲಿ ಕಾವೇರಿ ಹರಿಯುತ್ತಿದೆ. ಎರಡು ಗ್ರಾ.ಪಂ.ಗಳಿಗೂ ನದಿಯನ್ನು ಸಂರಕ್ಷಿಸುವ ಜವಾಬ್ದಾರಿ ಇದೆ. ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕೆಲವು ಮನೆಗಳ ಶೌಚಾಲಯದ ಕೊಳಚೆ ನೀರು ಕಳೆದ ಹಲವು ತಿಂಗಳುಗಳಿಂದ ನದಿಗೆ ಹರಿಯುತ್ತಿದ್ದು, ಗ್ರಾ.ಪಂ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದೀಗ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಫಿ ಪಲ್ಪಿಂಗ್ ನೀರು ನೇರವಾಗಿ ಕಾವೇರಿ ಒಡಲು ಸೇರುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಸಾರ್ವಜನಿಕರಲ್ಲಿ ಮಾರಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಕಾವೇರಿ ಸಂರಕ್ಷಣೆಯ ಸಂಘಟನೆಗಳು ನಾಪತ್ತೆ !
ಕಾವೇರಿ ನದಿ ಸಂರಕ್ಷಣೆಯ ಹೆಸರಿನಲ್ಲಿ ಹಲವು ಸಂಘಟನೆಗಳು ಜಿಲ್ಲೆಯಲ್ಲಿದ್ದು, ಕಾವೇರಿ ನದಿ ಅಪಾಯಕಾರಿಯಾಗಿ ಹರಿಯುತ್ತಿದ್ದರೂ ಇದರ ಬಗ್ಗೆ ಕಾಳಜಿ ವಹಿಸದೆ ಕೇವಲ ಪ್ರಚಾರಕ್ಕಾಗಿ ಒಂದಿಷ್ಟು ಕಸ ಗುಡಿಸಿ ತೆರಳುವಂತಾಗಿದೆ. ಇನ್ನು ನೆಲ್ಯಹುದಿಕೇರಿ ಮತ್ತು ಸಿದ್ದಾಪುರ ಭಾಗದಲ್ಲಿರುವ ನದಿ ಸಂರಕ್ಷಣೆ ಹಾಗೂ ಸ್ವಚ್ಛತೆ ನಮ್ಮ ಧ್ಯೇಯ ಎಂದು ಹೇಳಿಕೊಂಡಿರುವ ಕೆಲವು ಯುವ ಸಂಘಟನೆಗಳ ಕಣ್ಣೆದುರಿಗೆ ಕಾವೇರಿ ಕಲುಷಿತಗೊಳ್ಳುತ್ತಿದ್ದರೂ ಮೌನವಾಗಿರುವುದು ದುರಂತವೇ ಸರಿ.

ಕಾವೇರಿ ನದಿಗೆ ಕಾಫಿ ಪಲ್ಪಿಂಗ್ ತ್ಯಾಜ್ಯ ನೀರು ಹರಿಯ ಬಿಡುತ್ತಿರುವುದರ ಬಗ್ಗೆ ಪಂಚಾಯತ್‌ನ ಗಮನಕ್ಕೆ ಬಂದಿದ್ದು, ತಕ್ಷಣದಿಂದ ತ್ಯಾಜ್ಯ ನೀರು ಹರಿಯಬಿಡುತ್ತಿರುವುದನ್ನು ನಿಲ್ಲಿಸಬೇಕೆಂದು ಫೆ. 15 ರಂದು ಕಾಫಿ ತೋಟದ ಮಾಲಕರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ಮಾಲಕರ ಗೆದ್ದೆಗೆ ನೀರು ಹರಿಯ ಬಿಟ್ಟಿದ್ದು, ನದಿಗೆ ಹರಿಯ ಬಿಡಲಿಲ್ಲ ಎಂದು ಮಾಲಕರು ಹಿಂಬರಹ ನೀಡಿದ್ದಾರೆ. ಪಂಚಾಯತ್‌ನ ನೋಟಿಸ್ ಮೀರಿ ನದಿನೀರಿಗೆ ತ್ಯಾಜ್ಯ ನೀರು ಹರಿಯ ಬಿಡುತ್ತಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

-ವಿಶ್ವನಾಥ್, ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

Writer - ಮುಸ್ತಫಾ ಸಿದ್ದಾಪುರ

contributor

Editor - ಮುಸ್ತಫಾ ಸಿದ್ದಾಪುರ

contributor

Similar News