ಕ್ರಿಕೆಟ್ ಪಂದ್ಯಾವಳಿಯ ಒಂದು ಲಕ್ಷ ರೂ. ಬಹುಮಾನವನ್ನು ಹುತಾತ್ಮ ಯೋಧರ ಕ್ಷೇಮನಿಧಿಗೆ ನೀಡಿದ ಮಂಗಳೂರು ಐಎಂಎ ವೈದ್ಯರು

Update: 2019-02-17 04:47 GMT

ಮಂಗಳೂರು, ಫೆ.17: ನಗರದ ವೈದ್ಯರಿಗಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಮಂಗಳೂರು ಆಯೋಜಿಸುವ ವಾರ್ಷಿಕ ಕ್ರಿಕೆಟ್ ಪಂದ್ಯಾಟದಲ್ಲಿ ಗೆದ್ದ ಡಾ.ಹಂಸರಾಜ್ ಆಳ್ವ ಮಾಲಕತ್ವದ ಚಾಂಪಿಯನ್ ತಂಡ ಬಹುಮಾನದ ಮೊತ್ತ ಒಂದು ಲಕ್ಷ ರೂ.ನ್ನು ಹುತಾತ್ಮ ಯೋಧರ ಕ್ಷೇಮನಿಧಿಗೆ ನೀಡುವುದಾಗಿ ಘೋಷಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ವರ್ಷಂಪ್ರತಿಯಂತೆ ಜರುಗುವ ಮಂಗಳೂರು ಐಎಂಎಯ ವಾರ್ಷಿಕ ಕ್ರಿಕೆಟ್ ಪಂದ್ಯಾಟ ನಗರದ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಇದರಲ್ಲಿ ನಗರದ ಖ್ಯಾತ ವೈದ್ಯರುಗಳ ಮಾಲಕತ್ವದ ಆರು ತಂಡಗಳು ಸೆಣಸಿದ್ದವು. ಡಾ.ಸಚ್ಚಿದಾನಂದ ರೈ, ಡಾ.ಪ್ರಶಾಂತ್ ಮಾರ್ಲ, ಡಾ.ಹಂಸರಾಜ್ ಆಳ್ವ, ಡಾ.ಯೂಸುಫ್ ಕುಂಬ್ಳೆ, ಡಾ.ಅಜಿತ್ ಕುಮಾರ್ ಹಾಗೂ ಡಾ.ಪವನ್ ಹೆಗ್ಡೆ ಮಾಲಕತ್ವದಲ್ಲಿ ವೈದ್ಯರ ತಂಡಗಳು ಆಡಿದ್ದವು. ಅಂತಿಮ ಹಣಾಹಣಿಯಲ್ಲಿ ಡಾ.ಹಂಸರಾಜ್ ಆಳ್ವರ ತಂಡದ ನಾಯಕ ಡಾ.ಮಿಥುನ್ ಶೆಟ್ಟಿಯವರ ಸಮಯೋಚಿತ ಆಟದಿಂದ ನೆರವಿನಿಂದ ಡಾ.ಪವನ್ ಹೆಗ್ಡೆಯವರ ತಂಡವನ್ನು ರೋಚಕವಾಗಿ ಮಣಿಸಿತು. ಚಾಂಪಿಯನ್ ತಂಡವು ಬಹುಮಾನವಾಗಿ ಒಂದು ಲಕ್ಷ ರೂಪಾಯಿ ಪಡೆದಿತ್ತು.

ವಿಜೇತ ತಂಡದ ಮಾಲಕರಾದ ಡಾ.ಹಂಸರಾಜ್ ಆಳ್ವ ಈ ಬಹುಮಾನದ ಹಣವನ್ನ ಹುತಾತ್ಮ ಯೋಧರ ಕ್ಷೇಮ ನಿಧಿಗೆ ಕೊಡುವುದಾಗಿ ಘೋಷಿಸಿ ಮಾನವೀಯತೆ ಮೆರೆದು ಮಾದರಿಯಾದರು.

ಶನಿವಾರ ರಾತ್ರಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಕ್ರೀಡಾಂಗಣದ ಮಾಲಕ ಸಹ್ಯಾದ್ರಿ ಸಂಸ್ಥೆಯ ಶ್ರೀ ಮಂಜುನಾಥ ಭಂಡಾರಿ, ತಂಡಗಳ ಮಾಲಕರಾದ ಐಎಂಎ ಅಧ್ಯಕ್ಷ ಡಾ.ಸಚ್ಚಿದಾನಂದ ರೈ, ಡಾ.ಯೂಸುಫ್ ಕುಂಬ್ಳೆ, ಡಾ.ಪ್ರಶಾಂತ್ ಮಾರ್ಲ, ಡಾ.ಪವನ್ ಹೆಗ್ಡೆ, ಡಾ.ಅಜಿತ್ ಕುಮಾರ್, ಡಾ.ಹಂಸರಾಜ್ ಆಳ್ವ, ಐಎಂಎ ಮಂಗಳೂರಿನ ನಿಯೋಜಿತ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಐಎಂಎ ಮಂಗಳೂರಿನ ಪ್ರಧಾನ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ಸಹಿತ ನೂರಾರು ಹಿರಿ ಕಿರಿಯ ವೈದ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News