ದೇವೇಗೌಡ ವಿರುದ್ಧ ಶಾಸಕ ಪ್ರೀತಂ ಹೇಳಿಕೆ ಖಂಡನೀಯ: ಮುಹಮ್ಮದ್ ಕುಂಞಿ

Update: 2019-02-17 04:58 GMT

ಮಂಗಳೂರು, ಫೆ.17: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಆಡಿರುವ ಮಾತುಗಳು ಖಂಡನೀಯ ಎಂದು ದ.ಕ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಹಮ್ಮದ್ ಕುಂಞಿ ಹೇಳಿದ್ದಾರೆ.

ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಶನ್ ಕಮಲದ ಮೂಲಕ ಹೇಗಾದರೂ ಮಾಡಿ ಜೆಡಿಎಸ್ -ಕಾಂಗ್ರೆಸ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸುತ್ತಲೇ ಇದೆ. ಆದರೆ ಅದರಲ್ಲಿ ಅವರು ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ ಎಂದರು.
ಮುಂಬರುವ ಚುನಾವಣೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಜೆಡಿಎಸ್ ಕೈ ಜೋಡಿಸಲಿದೆ ಎಂದು ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

* ದ.ಕ. ಜಿಲ್ಲೆಯಲ್ಲಿ 14,917 ರೈತರ ಸಾಲಮನ್ನಾ:
ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಮಾತನಾಡಿ, ಈ ಬಾರಿಯ ರಾಜ್ಯ ಬಜೆಟ್ ಬಳಿಕ ದ.ಕ. ಜಿಲ್ಲೆಯಲ್ಲಿ 14,917 ರೈತರ 114 ಕೋಟಿ 57ಲಕ್ಷ ರೂ. ಸಾಲಮನ್ನಾ ಆಗಲಿದೆ. ಪ್ರಥಮ ಬಾರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1,825 ರೈತರ 58.37 ಲಕ್ಷ ರೂ ಸಾಲಮನ್ನಾ ಮಾಡಲು ಸರಕಾರ ಹಣ ಬಿಡುಗಡೆ ಮಾಡಿದೆ. ಕುಸಿಯುತ್ತಿರುವ ಭತ್ತದ ಕೃಷಿ ಸಂರಕ್ಷಣೆಗೆ ಸರಕಾರ ಮುಂದಾಗಿದೆ. ಜಿಲ್ಲೆಯ ಬೀಚ್ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮ ಚಟುವಟಿಕೆಗೆ ಪ್ರೋತ್ಸಾಹ ನೀಡಿದೆ. ಒಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಯುವಕರಿಗೆ ಉದ್ಯೋಗ ಮತ್ತು ಅಭಿವೃದ್ಧಿಗೆ ಶಕ್ತಿ ವರ್ಧಕವಾಗುವ ಯೋಜನೆಗಳಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

 *ಮಣಿಪಾಲ -ಕೊಣಾಜೆ ಎಜುಕೇಶನ್ ಕಾರಿಡಾರ್:
ಮಣಿಪಾಲ-ಕೊಣಾಜೆ ಎಜುಕೇಶನ್ ಕಾರಿಡಾರ್ ಎಂದು ಘೋಷಿಸಿ ಅದನ್ನು ಅಭಿವೃದ್ಧಿ ಪಡಿಸಲು ಸರಕಾರ ಆಸಕ್ತಿ ಹೊಂದಿದೆ ಮತ್ತು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ. ಆದರೆ ರಾಷ್ಟ್ರೀಯ ಹೆದ್ದಾರಿ 66ರ ವಿಳಂಬ ಕಾಮಗಾರಿ ಇದಕ್ಕೆ ತೊಡಕಾಗಿ ಪರಿಣಮಿಸಿದೆ ಎಂದವರು ಹೇಳಿದರು.

*ಶೀಘ್ರವೇ ಮುಲ್ಕಿ ತಾಲೂಕು ಘೋಷಣೆ

ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ಮುಲ್ಕಿ ತಾಲೂಕು ಘೋಷಣೆಯ ಬಗ್ಗೆ ನಿರ್ಧರಿಸಲಾಗಿತ್ತು. ಶೀಘ್ರದಲ್ಲೇ ಅದನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ಕಡಬ ಹಾಗೂ ಮೂಡುಬಿದಿರೆ ತಾಲೂಕು ಆದಷ್ಟು ಶೀಘ್ರ ಉದ್ಘಾಟನೆಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ಸುಶೀಲ್ ನರೋನ್ಹ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ದ.ಕ. ಜಿಲ್ಲಾ ಜೆಡಿಎಸ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News