ಅನುಮಾನ ಹುಟ್ಟಿಸಿದೆ ನೋಟು ರದ್ದತಿ ಅವಧಿಯಲ್ಲಿ ಮಹಾರಾಷ್ಟ್ರದ ಮಾಜಿ ಉನ್ನತ ಅಧಿಕಾರಿಯ ಬ್ಯಾಂಕ್ ವಹಿವಾಟು

Update: 2019-02-17 13:59 GMT

ಮುಂಬೈ, ಫೆ.17: ನೋಟು ರದ್ದತಿ ಅವಧಿಯಲ್ಲಿ ಮಹಾರಾಷ್ಟ್ರದ ಮಾಜಿ ಉನ್ನತ ಅಧಿಕಾರಿಯೊಬ್ಬರು ನಡೆಸಿದ ಅಧಿಕ ಮೌಲ್ಯದ ನೋಟುಗಳ ವಹಿವಾಟು ಕೇಂದ್ರೀಯ ಸಂಸ್ಥೆಗಳ ದಟ್ಟ ಅವಮಾನಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಈ ಅಧಿಕಾರಿ 2016ರ ನವೆಂಬರ್ 8ರಂದು ನೋಟು ರದ್ದತಿಯಾದ ಅವಧಿಯಲ್ಲಿ ಗೃಹ ಇಲಾಖೆಯ ಹೊಣೆ ಹೊಂದಿದ್ದರು. ನಕಲಿ ಮತ್ತು ಕಳ್ಳನೋಟುಗಳ ವಿಚಾರದಲ್ಲಿ ಆರ್‍ ಬಿಐ ಜತೆಗೆ ಸಮನ್ವಯ ಸಾಧಿಸುವ ಹೊಣೆಯನ್ನು ಇವರಿಗೆ ವಹಿಸಲಾಗಿತ್ತು. ಇದರ ಜತೆಗೆ ಅವರು ಕಾಲಕಾಲಕ್ಕೆ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ವರದಿಯನ್ನೂ ಸಲ್ಲಿಸಬೇಕಾಗಿತ್ತು. ಈ ಅಧಿಕಾರಿ ತನ್ನ ವೈಯಕ್ತಿಕ ಪಾನ್ ಸಂಖ್ಯೆಗೆ ಸಂಪರ್ಕಿತವಾಗಿದ್ದ ಬ್ಯಾಂಕ್ ಖಾತೆಯಿಂದ ಮೂರು ಕಂತಿನಲ್ಲಿ ಸುಮಾರು 2.5 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.

ಕೆ.ಪಿ.ಬಕ್ಷಿ ಹೆಸರಿನ ಪಾನ್ ಕಾರ್ಡ್‍ಗೆ ಸಂಪರ್ಕ ಹೊಂದಿದ್ದ ಖಾತೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ತನಿಖೆ ನಡೆಸಬೇಕು ಎಂದು ಕೇಂದ್ರೀಯ ವಿಚಕ್ಷಣಾ ಆಯೋಗ, ಮಹಾರಾಷ್ಟ್ರದ ಮುಖ್ಯಸ್ಥ ಡಿ.ಕೆ.ಜೈನ್ ಅವರಿಗೆ ಪತ್ರ ಬರೆದಿದೆ.

ಬಾಲಕೃಷ್ಣ 2016ರ ನವೆಂಬರ್ 30ರಂದು ನಿವೃತ್ತರಾಗಿದ್ದು, ಆ ಬಳಿಕ ರಾಜ್ಯ ಜಲ ಸಂಪನ್ಮೂಲ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಾಲಕೃಷ್ಣ ಅವರು 2016ರ ನವೆಂಬರ್ 8ರಿಂದ 2017ರ ಜನವರಿ 31ರೊಳಗೆ 1.5 ಕೋಟಿ ರೂಪಾಯಿ, 65 ಲಕ್ಷ ರೂಪಾಯಿ ಹಾಗೂ 50 ಲಕ್ಷ ರೂಪಾಯಿಗಳ ಮೂರು ವಹಿವಾಟು ನಡೆಸಿದ್ದಾರೆ ಎಂಬ ಸುಳಿವನ್ನು ಹಣಕಾಸು ಸಚಿವಾಲಯದ ಹಣಕಾಸು ಗುಪ್ತಚರ ಘಟಕದಿಂದ ಪಡೆದ ಸಿವಿಸಿ ಈ ಬಗ್ಗೆ ತನಿಖೆಗೆ ಸೂಚಿಸಿದೆ.

ಇತರ ಕೆಲ ಹಿರಿಯ ಅಧಿಕಾರಿಗಳ ಷೇರು ಟ್ರೇಡಿಂಗ್‍ ನ ಬಗ್ಗೆಯೂ ಹಲವು ಅನುಮಾನಗಳನ್ನು ಈ ವರದಿ ವ್ಯಕ್ತಪಡಿಸಿದೆ. ಗೃಹಖಾತೆಯನ್ನೂ ಹೊಂದಿರುವ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಈ ಪ್ರಕರಣ ಕುರಿತ ವರದಿಯ ವಿವರ ನೀಡಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News