ಪುಣೆ ಎಫ್‌ಟಿಐಐ ವಿದ್ಯಾರ್ಥಿಯ ವಜಾ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2019-02-17 15:38 GMT

  ಪುಣೆ, ಫೆ.17: ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಆರೋಪದಲ್ಲಿ ಪುಣೆಯ ‘ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)’ದ ವಿದ್ಯಾರ್ಥಿಯೊಬ್ಬನನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

 ಎಫ್‌ಟಿಐಐಯಲ್ಲಿ ‘ಕಲಾ ನಿರ್ದೇಶನ ಮತ್ತು ನಿರ್ಮಾಣ’ ಅಧ್ಯಯನದ ತೃತೀಯ ವರ್ಷದ ವಿದ್ಯಾರ್ಥಿಯಾಗಿರುವ ಶ್ರೀನಿವಾಸ ರಾವ್ ತಮರಾಲ ಮತ್ತು ಸಹಪಾಠಿ ಮನೋಜ್ ಎಂಬವರನ್ನು 2018ರ ಡಿಸೆಂಬರ್ 19ರಂದು ಕಾಲೇಜಿನಿಂದ ಅಮಾನತುಗೊಳಿಸಲಾಗಿತ್ತು. ವಿಭಾಗದ ಮುಖ್ಯಸ್ಥ, ಅಸೋಸಿಯೇಟ್ ಪ್ರೊಫೆಸರ್ ವಿಕ್ರಮ್ ವರ್ಮರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಇವರ ಮೇಲಿದೆ.

 ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅನುಚಿತವಾಗಿ ವರ್ತಿಸಿರುವ ಬಗ್ಗೆ ವಿಭಾಗ ಮುಖ್ಯಸ್ಥರು ಲಿಖಿತ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಗೊಳಿಸಿ, ಕ್ಷಮೆ ಯಾಚನೆಗೆ ಕಾಲಾವಧಿ ನೀಡಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ನೇಮಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳೂ ಹಲವಾರು ಬಾರಿ ಅನುಚಿತ ವರ್ತನೆ ತೋರಿರುವುದು ತನಿಖೆಯ ಸಂದರ್ಭ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮನೋಜ್‌ನಿಂದ ಕ್ಷಮಾಪಣೆ ಪತ್ರ ಪಡೆದುಕೊಂಡು ಎಚ್ಚರಿಕೆ ನೀಡಿ ಬಿಟ್ಟುಬಿಡಲು ಹಾಗೂ ಶ್ರೀನಿವಾಸ್ ರಾವ್ ಮೂರನೇ ಬಾರಿಗೆ ಇಂತಹ ಕೃತ್ಯ ಎಸಗಿರುವ ಕಾರಣ ಹಾಗೂ ಕ್ಷಮೆ ಯಾಚಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರನ್ನು ಕಾಲೇಜಿನಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಎಫ್‌ಟಿಐಐ ನಿರ್ದೇಶಕ ಭೂಪೇಂದ್ರ ಕೈಂಥೊಲ ತಿಳಿಸಿದ್ದಾರೆ.

ಅದರಂತೆ ರಾವ್‌ರನ್ನು ಶುಕ್ರವಾರ ರಾತ್ರಿ ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ರಾತ್ರಿಯಿಡೀ ಕಾಲೇಜು ಕ್ಯಾಂಪಸ್‌ನ ಗೇಟ್ ಬಳಿ ಪ್ರತಿಭಟನೆ ನಡೆಸಿದ ರಾವ್‌ಗೆ ವಿದ್ಯಾರ್ಥಿ ಸಂಘಟನೆಯ ನಾಯಕರು ಹಾಗೂ ಹಲವು ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾನು ಯಾವುದೇ ತಪ್ಪು ಎಸಗಿಲ್ಲ. ಬಡ ಕುಟುಂಬದವನಾದ ಕಾರಣ ಕೆಲವು ಕಲಿಕಾ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅಭ್ಯಾಸ ನಡೆಸಲು ಅಗತ್ಯವಿರುವ ಕೆಲವು ಉಪಕರಣಗಳನ್ನು ಕಾಲೇಜಿನಿಂದ ಒದಗಿಸುವಂತೆ ವಿಭಾಗ ಮುಖ್ಯಸ್ಥರಲ್ಲಿ ಕೇಳಿಕೊಂಡಿದ್ದೇನೆ ಅಷ್ಟೇ. ಅನುಚಿತವಾಗಿ ವರ್ತಿಸಿಲ್ಲದ ಕಾರಣ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News