ಎದೆಯಲ್ಲಿ ಪ್ರತೀಕಾರದ ಜ್ವಾಲೆಯಿದೆ: ಪ್ರಧಾನಿ ಮೋದಿ

Update: 2019-02-17 16:13 GMT

ಪಾಟ್ನ, ಫೆ.17: ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಗೆ ಪ್ರತೀಕಾರ ತೀರಿಸಬೇಕೆನ್ನುವ ಕೂಗು ಎಲ್ಲೆಡೆ ಮೊಳಗುತ್ತಿರುವಂತೆಯೇ ಪಾಟ್ನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನರ ಹೃದಯದಲ್ಲಿ ಜ್ವಲಿಸುತ್ತಿರುವ ಕ್ರೋಧಾಗ್ನಿಯ ಜ್ವಾಲೆ ತಮ್ಮ ಎದೆಯಲ್ಲೂ ಪ್ರಜ್ವಲಿಸುತ್ತಿದೆ ಎಂದಿದ್ದಾರೆ.

 ನಮ್ಮ ನೆಲದಲ್ಲಿ ಸೈನಿಕರ ರಕ್ತ ಹರಿಸಿದ ಪಾಪಿಗಳನ್ನು ಸುಮ್ಮನೆ ಬಿಡುವುದಿಲ್ಲ. ರಾಷ್ಟ್ರದ ದುಖ, ಆಕ್ರೋಶದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದರು. ಭಯೋತ್ಪಾದಕರ ದಾಳಿಗೆ ಪ್ರತೀಕಾರ ತೀರಿಸಬೇಕೆನ್ನುವ ಆಕ್ರೋಶ ದೇಶದೆಲ್ಲೆಡೆಯ ಜನರಿಂದ ಕೇಳಿಬರುತ್ತಿದೆ. ಭಯೋತ್ಪಾದಕರ ವಿರುದ್ಧ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ ಅವರೂ ಟ್ವೀಟ್ ಮಾಡಿದ್ದಾರೆ.

 ಈ ಮಧ್ಯೆ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಭಾರತ ರಾಜತಾಂತ್ರಿಕ ಕ್ರಮಗಳಿಗೆ ಮುಂದಾಗಿದೆ. ಅಲ್ಲದೆ ಪಾಕಿಸ್ತಾನಕ್ಕೆ ನೀಡಲಾಗಿರುವ ಪರಮಾಪ್ತ ಸ್ಥಾನಮಾನವನ್ನೂ ರದ್ದುಗೊಳಿಸಲಾಗಿದೆ. ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇ.200ರಷ್ಟು ಹೆಚ್ಚಿಸಲಾಗಿದೆ. ಸುಮಾರು 40ಕ್ಕೂ ಹೆಚ್ಚು ರಾಷ್ಟ್ರಗಳು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು , ಜೆಇಎಂ ಮುಖಂಡ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸುವ ಪ್ರಯತ್ನಕ್ಕೆ ಭಾರತವು ಅಂತಾರಾಷ್ಟ್ರೀಯ ಬೆಂಬಲವನ್ನು ಕ್ರೋಢೀಕರಿಸುತ್ತಿದೆ.

 ಅಲ್ಲದೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮುಖಂಡರಿಗೆ ನೀಡಲಾಗಿರುವ ಭದ್ರತೆಯನ್ನು ರವಿವಾರ ಸರಕಾರ ಹಿಂಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News