ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ತೆರಬೇಕಾಗದ ಬೆಲೆ ಅಪಾರ: ಇರಾನ್ ಎಚ್ಚರಿಕೆ

Update: 2019-02-17 16:20 GMT

ಟೆಹರಾನ್, ಫೆ. 17: ಈ ವಾರದ ಆರಂಭದಲ್ಲಿ ಗಡಿ ಸಮೀಪ ನಡೆದ ಆತ್ಮಹತ್ಯಾ ಬಾಂಬ್ ದಾಳಿಯನ್ನು ನಡೆಸಿದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ನೆರೆಯ ಪಾಕಿಸ್ತಾನ ‘ಭಾರೀ ಬೆಲೆ ತೆರಬೇಕಾಗುತ್ತದೆ’ ಎಂದು ಇರಾನ್ ಶನಿವಾರ ಎಚ್ಚರಿಕೆ ನೀಡಿದೆ.

ಆ ದಾಳಿಯಲ್ಲಿ ಇರಾನ್‌ನ ಅತ್ಯುನ್ನತ ಸೇನಾ ಘಟಕ ರೆವಲೂಶನರಿ ಗಾರ್ಡ್ಸ್‌ನ 27 ಸೈನಿಕರು ಹತರಾಗಿರುವುದನ್ನು ಸ್ಮರಿಸಬಹುದಾಗಿದೆ.

ಇರಾನ್ ಸೈನಿಕರ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಸೌದಿ ಅರೇಬಿಯ ಮತ್ತು ಯನೈಟೆಡ್ ಅರಬ್ ಎಮಿರೇಟ್ಸ್ ಬೆಂಬಲ ನೀಡುತ್ತಿವೆ ಎಂಬುದಾಗಿಯೂ ರೆವಲೂಶನರಿ ಗಾರ್ಡ್ಸ್‌ನ ಮುಖ್ಯಸ್ಥ ಮೇಜರ್ ಜನರಲ್ ಮುಹಮ್ಮದ್ ಅಲಿ ಜಫಾರಿ ಆರೋಪಿಸಿದರು. ಈ ದೇಶಗಳು ‘ಪ್ರತೀಕಾರದ ಕ್ರಮ’ಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

‘‘ಪಾಕಿಸ್ತಾನದ ಸೇನೆ ಮತ್ತು ಭದ್ರತಾ ಸಂಸ್ಥೆ ಈ ಭಯೋತ್ಪಾದಕ ಗುಂಪುಗಳಿಗೆ ಯಾಕೆ ಆಶ್ರಯ ನೀಡುತ್ತದೆ? ಇದಕ್ಕೆ ಪಾಕಿಸ್ತಾನ ಭಾರೀ ಬೆಲೆಯನ್ನು ತೆರುವುದರಲ್ಲಿ ಸಂಶಯವಿಲ್ಲ’’ ಎಂದು ಜಫಾರಿ ಹೇಳಿದರು.

ಬುಧವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟ ಸೈನಿಕರ ಅಂತ್ಯಸಂಸ್ಕಾರಕ್ಕಾಗಿ ಸೇರಿದ ಭಾರೀ ಸಂಖ್ಯೆಯ ಜನರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅವರ ಭಾಷಣವು ಸರಕಾರಿ ಟೆಲಿವಿಶನ್‌ನಲ್ಲಿ ನೇರಪ್ರಸಾರಗೊಂಡಿತು.

► ಪದೇ ಪದೇ ಭದ್ರತಾ ಪಡೆಗಳ ಮೇಲೆ ದಾಳಿ

ದೇಶದ ಸುನ್ನಿ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಭಯೋತ್ಪಾದಕರು ಆಗ್ನೇಯ ವಲಯದಲ್ಲಿ ಭದ್ರತಾ ಪಡೆಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದಾರೆ.

‘‘ಕಳೆದ ವರ್ಷದಲ್ಲಿ ಆರು ಅಥವಾ ಏಳು ಆತ್ಮಹತ್ಯಾ ದಾಳಿಗಳನ್ನು ತಡೆಯಲಾಗಿದೆ. ಆದರೆ, ಈ ದಾಳಿಯನ್ನು ನಡೆಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ’’ ಎಂದು ಜಫಾರಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News