ವೆನೆಝವೆಲ ಗಡಿಗೆ ನೆರವು ಸಾಮಗ್ರಿಗಳನ್ನು ಸಾಗಿಸಿದ ಅಮೆರಿಕ ಸೇನಾ ವಿಮಾನಗಳು

Update: 2019-02-17 16:23 GMT

ಕುಕುಟ (ಕೊಲಂಬಿಯ), ಫೆ. 17: ಅಮೆರಿಕ ಸೇನೆಯು ಟನ್‌ ಗಟ್ಟಳೆ ಮಾನವೀಯ ನೆರವು ಸಾಮಗ್ರಿಗಳನ್ನು ವೆನೆಝುವೆಲದ ಗಡಿಯಲ್ಲಿರುವ ಕೊಲಂಬಿಯದ ಪಟ್ಟಣ ಕುಕುಟಕ್ಕೆ ಸಾಗಿಸಿದೆ.

ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಅಧಿಕಾರವನ್ನು ಧಿಕ್ಕರಿಸಿ, ಅವರ ಎದುರಾಳಿ ಹಾಗೂ ಪ್ರತಿಪಕ್ಷ ನಾಯಕ ಜುವಾನ್ ಗ್ವಾಯಿಡೊಗೆ ಬೆಂಬಲ ನೀಡುವುದು ಅಮೆರಿಕದ ಈ ಕ್ರಮದ ಉದ್ದೇಶವಾಗಿದೆ.

ಅಮೆರಿಕದ ರಾಜ್ಯ ಫ್ಲೋರಿಡದಲ್ಲಿರುವ ಹೋಮ್‌ ಸ್ಟೆಡ್ ವಾಯು ಮೀಸಲು ನೆಲೆಯಿಂದ ಹಾರಿದ ವಾಯುಪಡೆಯ ಮೂರು ಸಿ-17 ಸರಕು ವಿಮಾನಗಳು ಕುಕುಟ ನಗರದಲ್ಲಿ ಇಳಿದವು.

ಗಡಿ ನಗರ ಕುಕುಟ ಈಗ ನೆರವು ಸಾಮಗ್ರಿಗಳ ಸ್ವೀಕಾರ ಕೇಂದ್ರವಾಗಿ ಪರಿಣಮಿಸಿದೆ. ಇಲ್ಲಿ ವೆನೆಝುವೆಲದ ವಲಸಿಗರು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಜುವಾನ್ ಗ್ವಾಯಿಡೊ ಅವರ ಬೆಂಬಲಿಗರು ನೆರವು ಸಾಮಗ್ರಿಗಳನ್ನು ವೆನೆಝುವೆಲದ ನಿರಾಶ್ರಿತರಿಗೆ ವಿತರಿಸುತ್ತಾರೆ.

ಪರಿಹಾರಕ್ಕಾಗಿ ಪ್ರತಿಪಕ್ಷ ನಾಯಕನಿಂದ ಮನವಿ

ಜುವಾನ್ ಗ್ವಾಯಿಡೊ ಅವರನ್ನು ಅಮೆರಿಕ ಹಾಗೂ ಇತರ ಕೆಲವು ದೇಶಗಳು ವೆನೆಝವೆಲದ ಅಧ್ಯಕ್ಷರನ್ನಾಗಿ ಮಾನ್ಯ ಮಾಡಿವೆ. ಅವರ ಮನವಿಯ ಮೇರೆಗೆ ಅಂತರ್‌ರಾಷ್ಟ್ರೀಯ ನೆರವು ಹರಿದು ಬರುತ್ತಿದೆ.

‘‘ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ’’ ಎಂದು ಯುಎಸ್‌ ಏಡ್ ಆಡಳಿತಾಧಿಕಾರಿ ಮಾರ್ಕ್ ಗ್ರೀನ್, ಕುಕುಟ ವಿಮಾನ ನಿಲ್ದಾಣದಲ್ಲಿ ನೆರವು ಸ್ವೀಕರಿಸುವುದಕ್ಕಾಗಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದರು. ‘‘ಇನ್ನಷ್ಟು ನೆರವು ಸಾಮಗ್ರಿಗಳು ಬರುತ್ತಿವೆ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News