ಭದ್ರತಾ ಲೋಪದ ವಿನಃ ಇಂತಹ ದಾಳಿ ನಡೆಯದು: ‘ರಾ’ ಮಾಜಿ ಅಧ್ಯಕ್ಷ ವಿಕ್ರಮ್ ಸೂದ್

Update: 2019-02-17 16:31 GMT

ಹೈದರಾಬಾದ್, ಫೆ.17: ಎಲ್ಲೋ ಒಂದೆಡೆ ಭದ್ರತಾ ಲೋಪವಾಗದೆ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಂತಹ ಪ್ರಕರಣ ನಡೆಯಲು ಸಾಧ್ಯವಿಲ್ಲ ಎಂದು ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಅಧ್ಯಕ್ಷ ವಿಕ್ರಮ್ ಸೂದ್ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಿ ತಪ್ಪಾಗಿದೆ ಎಂಬುದು ತಿಳಿದಿಲ್ಲ. ಆದರೆ ಭದ್ರತೆಯಲ್ಲಿ ಲೋಪವಾಗಿರುವುದಂತೂ ಸ್ಪಷ್ಟ. ಒಬ್ಬನಿಗಿಂತ ಹೆಚ್ಚು ಮಂದಿ ಇದರಲ್ಲಿ ಶಾಮೀಲಾಗಿದ್ದಾರೆ. ಸ್ಪೋಟಕ ತಂದ ವ್ಯಕ್ತಿ, ಅದನ್ನು ಒಂದೆಡೆ ಇಟ್ಟ ವ್ಯಕ್ತಿ, ಕಾರನ್ನು ಪಡೆದ ವ್ಯಕ್ತಿ, ಹೀಗೆ ಹಲವು ಮಂದಿ ಇದರಲ್ಲಿದ್ದಾರೆ. ಇವರಿಗೆ ಸಿಆರ್‌ ಪಿಎಫ್ ವಾಹನ ಪ್ರಯಾಣಿಸುವ ದಿನ, ಸಮಯ ಮತ್ತು ದಾರಿಯ ಬಗ್ಗೆ ತಿಳಿದಿತ್ತು ಎಂದವರು ಹೇಳಿದರು.

ಸುರಕ್ಷತೆಯ ಕಾರಣಕ್ಕೆ ಸಾಮಾನ್ಯವಾಗಿ ಯೋಧರನ್ನು ವಿಮಾನ ಮಾರ್ಗದಲ್ಲಿ ಕರೆದೊಯ್ಯಲಾಗುತ್ತದೆ. ಆದರೆ ಗುರುವಾರ ಸಿಆರ್‌ ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 78 ವಾಹನಗಳು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಂದರ್ಭ ಆತ್ಮಾಹುತಿ ದಾಳಿ ನಡೆದಿದೆ. ಭಾರತವು ಪ್ರತೀಕಾರ ಕ್ರಮ ಕೈಗೊಳ್ಳುವುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಕ್ಷಣ ಪ್ರತಿಕ್ರಿಯಿಸಲು ಇದೇನೂ ಬಾಕ್ಸಿಂಗ್ ಪಂದ್ಯವಲ್ಲ. ಪ್ರಧಾನಿ ಹೇಳಿದಂತೆ ನಿಮಗೆ ಅನುಕೂಲವಾದ ಮತ್ತು ಸೂಕ್ತವೆನಿಸಿದ ಸಮಯ, ಪ್ರದೇಶದಲ್ಲಿ, ನಿಮ್ಮ ಆಯ್ಕೆಯಂತೆ ಪ್ರತ್ಯುತ್ತರ ನೀಡಬಹುದು. ಇದು ಇವತ್ತೇ ನಡೆಯಬಹುದು ಅಥವಾ ನಾಳೆಯೂ ನಡೆಯಬಹುದು ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News