ಪುಲ್ವಾಮ ಘಟನೆಯನ್ನು ಕೋಮುಗಲಭೆಗೆ ಬಳಸಲು ಸಂಚು: ಹಿಂಸಾಚಾರಕ್ಕೆ ಗೋರಕ್ಷಕರಿಗೆ ಕರೆ

Update: 2019-02-17 16:58 GMT

"ಕತ್ತೆಗಳಂತಹ ಈ ಬುದ್ಧಿಜೀವಿಗಳು ನಿಮ್ಮ ಅಹವಾಲುಗಳನ್ನು ಕೇಳಿಸಿಕೊಳ್ಳಬೇಕಾದರೆ, ನೀವು ಮೊದಲು ಮಾಡಬೇಕಾದ ಕಾರ್ಯವೆಂದರೆ ದೊಡ್ಡ ಪ್ರಮಾಣದ ವಿವೇಚನಾರಹಿತ ಹಿಂಸಾಚಾರದಲ್ಲಿ ತೊಡಗುವುದು. ಗೋರಕ್ಷಕರೇ ನಿಮಗೆ ಏನು ಮಾಡಬೇಕು ಎಂದು ಗೊತ್ತಿದೆ. ಈ ಚಿಲ್ಲರೆ ಹತ್ಯೆಗಳನ್ನು ನಿಲ್ಲಿಸಿ"…… ಸಂಘಪರಿವಾರ ಬೆಂಬಲಿತ ಸುದ್ದಿ ಜಾಲತಾಣ OpIndia ಸಿಇಒ ರಾಹುಲ್ ರೋಶನ್ ಅವರು ಟ್ವಿಟರ್ ಮೂಲಕ ಗೋರಕ್ಷಕರಿಗೆ ನೀಡಿದ ಕರೆ ಇದು!

"ಈ ಚಿಲ್ಲರೆ ಹತ್ಯೆಗಳನ್ನು ಬಿಟ್ಟು ದೊಡ್ಡ ಪ್ರಮಾಣದ ಹಿಂಸಾಚಾರ ಎಸಗುವ ಮೂಲಕ ಗಮನ ಸೆಳೆಯಬೇಕು" ಎಂದು ರಾಹುಲ್ ಕರೆ ನೀಡಿದ್ದರು. ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಅವರ ಟ್ವೀಟ್‍ ಗೆ ಪ್ರತಿಯಾಗಿ ರೋಶನ್ ಈ ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ಭೂಷಣ್ ಅವರು, "ಹಲವಾರು ಮಂದಿ ಕಾಶ್ಮೀರಿ ಯುವಕರು ಏಕೆ ಉಗ್ರರಾಗುತ್ತಿದಾರೆ ಹಾಗೂ ಸಾಯಲು ಬಯಸುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ" ಎಂಬ ರಾಯ್ಟರ್ಸ್ ಸುದ್ದಿಯನ್ನು ಮರುಟ್ವೀಟ್ ಮಾಡಿದ್ದರಿಂದ ಸಿಟ್ಟಿಗೆದ್ದ ರೋಶನ್ ಈ ಟ್ವೀಟ್ ಮಾಡಿದ್ದಾರೆ.

ತಕ್ಷಣ ರೋಶನ್ ಈ ಟ್ವೀಟ್ ಡಿಲೀಟ್ ಮಾಡಿದ್ದು, ಅದರ ಬದಲಾಗಿ ರೈತರು ತಮ್ಮ ಅಮೂಲ್ಯ ಆಸ್ತಿ ಎನಿಸಿದ ಜಾನುವಾರುಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚಿತ್ರಗಳೊಂದಿಗೆ ಎರಡು ಟ್ವೀಟ್ ಮಾಡಿದ್ದಾರೆ.

ರೋಶನ್ ತಕ್ಷಣ ಟ್ವೀಟ್ ಡಿಲೀಟ್ ಮಾಡಿದ್ದರೂ, ಹಲವರು ಇದನ್ನು ಗಮನಿಸಿ, ರೋಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನೀವು ಬೇಗ ಯು ಟರ್ನ್ ತೆಗೆದುಕೊಂಡಿರಿ ರಾಹುಲ್, ಗೋರಕ್ಷಕರು ಹಿಂಸಾಚಾರದಲ್ಲಿ ತೊಡಗುವಂತೆ ಕರೆ ನೀಡಿದ್ದ ಟ್ವೀಟನ್ನು ನೀವು ಡಿಲಿಟ್ ಮಾಡಿದ್ದೀರಿ… ಆದರೆ ಟ್ವಿಟರ್ ನಿಮ್ಮನ್ನು ಬ್ಲಾಕ್ ಮಾಡಿದಾಗ ನೀವು ಪ್ರತಿಭಟನೆ, ರ್ಯಾಲಿಗಳನ್ನು ಮಾಡುತ್ತೀರಿ” ಎಂದು ರೋಹಿಣಿ ಮಕ್ಕರ್ ಎಂಬವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ರೋಶನ್ ಅವರ ಟ್ವೀಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಪುಲ್ವಾಮ ಘಟನೆಯನ್ನು ಕೋಮು ಹಿಂಸಾಚಾರಕ್ಕೆ ಬಳಸಲು ಸಮಾಜವಿರೋಧಿಗಳು ಸಂಚು ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News