ಫೆ.20ರಿಂದ ಜೈಲ್ ಭರೋ: ನಾರಾಯಣಸ್ವಾಮಿ ಎಚ್ಚರಿಕೆ

Update: 2019-02-17 17:25 GMT

ಪುದುಚೇರಿ,ಫೆ.17: ತನ್ನ ಸರಕಾರದ ಜನಕಲ್ಯಾಣ ಯೋಜನೆಳು ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತ ಪ್ರಸ್ತಾವಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ  ಅನುಮೋದನೆ ನೀಡಬೇಕೆಂದು ಆಗ್ರಹಿಸಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ನಡೆಸುತ್ತಿರುವ ಧರಣಿ ರವಿವಾರ ಐದನೆ ದಿನಕ್ಕೆ ಕಾಲಿರಿಸಿದೆ. ಫೆ.20ರಿಂದ ಜೈಲ್ ಭರೋ ನಡೆಸುವ ಮೂಲಕ ತನ್ನ ಹೋರಾಟವನ್ನು ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

  

‘‘ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಫೆಬ್ರವರಿ 7ರಂದು ನಾವು ಬರೆದಿರುವ ಪತ್ರದಲ್ಲಿ ಅಡಕವಾಗಿರುವ ನಮ್ಮ ಬೇಡಿಕೆಗಳು ಈಡೇರುವ ತನಕ ನಮ್ಮ ಪ್ರತಿಭಟನೆ ಮುಂದುವರಿಯಲಿದೆ’’ಎಂದು ಕಿರಣ್ ಬೇಡಿ ಅವರ ಅಧಿಕೃತ ನಿವಾಸ ‘ರಾಜ್‌ನಿವಾಸ’ದ ಮುಂದೆ ಧರಣಿ ನಡೆಸುತ್ತಿರುವ ನಾರಾಯಣಸ್ವಾಮಿ ತಿಳಿಸಿದ್ದಾರೆ. ಉಚಿತ ಅಕ್ಕಿ ವಿತರಣೆ ಯೋಜನೆ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳು  ತನ್ನ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತ 39 ಪ್ರಸ್ತಾವಗಳಿಗೆ ಲೆ.ಗ.ಕಿರಣ್ ಬೇಡಿ ಅವರು ಅನುಮೋದನೆ ನೀಡುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

ನಾರಾಯಣಸ್ವಾಮಿ ಅವರಿಗೆ ಬರೆದ ಪತ್ರವೊಂದರಲ್ಲಿ ಕಿರಣ್‌ಬೇಡಿ ಅವರು, ಮುಖ್ಯಮಂತ್ರಿಯ ಬಹಿರಂಗ ಪ್ರತಿಭಟನೆಯನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ಅವರು ನಡೆಸುತ್ತಿರುವ ಧರಣಿ ಕಾನೂನುಬಾಹಿರವೆಂದು ಹೇಳಿದ್ದಾರೆ. ಫೆಬ್ರವರಿ 21ರಂದು ಸಾರ್ವಜನಿಕ ವೇದಿಕೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಆಕೆ ಆಹ್ವಾನಿಸಿದ್ದರು. 2016ರ ಮೇನಲ್ಲಿ ಕಿರಣ್ ಬೇಡಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಲೆ.ಗವರ್ನರ್ ಆಗಿ ನೇಮಕಗೊಂಡಾಗಿನಿಂದ ಇಬ್ಬರೂ ವಿವಿಧ ಆಡಳಿತಾತ್ಮಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿ ನಾರಾಯಣ ಸ್ವಾಮಿ , ಅವರ ಸಂಪುಟ ಸಚಿವರು ಹಾಗೂ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ನಾಯಕರು ರವಿವಾರ ತಮ್ಮ ನಿವಾಸಗಳ ಛಾವಣಿ ಮೇಲೆ ಕಪ್ಪುಬಾವುಟ ಹಾರಿಸುವ ಮೂಲಕ ಲೆ.ಗವರ್ನರ್ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

ಪ್ರತಿಭಟನಕಾರರಿಗೆ ತಕ್ಕಶಾಸ್ತಿ ಮಾಡುವುದಾಗಿ ಬೇಡಿ ಅವರು ಬೆದರಿಕೆ ಹಾಕಿದ್ದಾರೆಂದು ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಮಣಿಯಲಾರೆವು. ಇದಕ್ಕಾಗಿ ನಾವು ಸಾಮೂಹಿಕ ಬಂಧನಕ್ಕೊಳಗಾಗಲೂ ಸಿದ್ಧರಿದ್ದೇವೆ ಎಂದು ಬೇಡಿ ಹೇಳಿದರು.

ಲೆಫ್ಟಿನೆಂಟ್ ಗವರ್ನರ್ ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸಿ ಪುದುಚೇರಿಯ ಮೈತ್ರಿಕೂಟ ಸರಕಾರದ ನಾಯಕರು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News