ಪಾಕ್ ಸೇನೆಯ ಮೇಲೆ ಆತ್ಮಾಹುತಿ ದಾಳಿ: ಕನಿಷ್ಟ 9 ಮಂದಿ ಸಾವು

Update: 2019-02-17 17:34 GMT

ಲಾಹೋರ್, ಫೆ.17: ಬಲೂಚಿಸ್ತಾನದ ಬಳಿ ಪಾಕಿಸ್ತಾನ ಸೇನೆಯ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಟ 9 ಮಂದಿ ಸಾವಿಗೀಡಾಗಿದ್ದು, 11 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಬಂದಿಳಿದ ಕೆಲವೇ ಗಂಟೆಗಳ ಮೊದಲು , ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಮಾರ್ಗದಲ್ಲಿರುವ ಟರ್ಬಟ್ ಮತ್ತು ಪಂಜ್‌ಗರ್ ಎಂಬಲ್ಲಿ ಈ ದಾಳಿ ನಡೆದಿದೆ. ಬಲೂಚ್ ರಾಜಿ ಅಯೋಜಿ ಸಂಗಾರ್(ಬ್ರಾಸ್) ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ‘ಬಲೂಚಿಸ್ತಾನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.

ಬಲೂಚಿಸ್ತಾನ ಪ್ರಾಂತ್ಯದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸುತ್ತಿರುವ ಬಲೂಚಿ ಲಿಬರೇಷನ್ ಆರ್ಮಿ, ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಹಾಗೂ ಬಲೂಚ್ ರಿಪಬ್ಲಿಕನ್ ಗಾರ್ಡ್ ಸಂಘಟನೆಗಳ ಒಕ್ಕೂಟವಾಗಿದೆ ‘ಬ್ರಾಸ್’. ರವಿವಾರ ಬೆಳಿಗ್ಗೆ ತಮ್ಮ ಸಂಘಟನೆಯ ಹೋರಾಟಗಾರರು ಪಾಕಿಸ್ತಾನದ ಭದ್ರತಾ ಪಡೆಯ ಗಸ್ತು ತಂಡದ ಮೇಲೆ ದಾಳಿ ನಡೆಸಿರುವುದಾಗಿ ‘ಬ್ರಾಸ್’ನ ವಕ್ತಾರ ಬಲೂಚ್‌ ಖಾನ್ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತದ ಭದ್ರತಾ ಪಡೆಯ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಘಟನೆಯ ಬಳಿಕ ಭಾರತೀಯ ಉಪಖಂಡ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿರುವಂತೆಯೇ ಪಾಕಿಸ್ತಾನದಲ್ಲಿ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News