ಪ್ರತ್ಯೇಕ ಅಪಘಾತ: ಕಣ್ಣೂರಿನ ಇಬ್ಬರು ಯುವಕರು ಸೇರಿ ನಾಲ್ವರು ಮೃತ್ಯು

Update: 2019-02-18 17:55 GMT

ಮಂಗಳೂರು, ಫೆ.18: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರೊಂದು ರಸ್ತೆ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.

ಅಡ್ಯಾರ್ ಕಣ್ಣೂರಿನ ಕುಂದಾಲ ಬದ್ರುದ್ದೀನ್ ಎಂಬವರ ಪುತ್ರ ಇಮ್ತಿಯಾಝ್ (20), ಕಣ್ಣೂರು ಜಾರಂದಬೆಟ್ಟು ನಿವಾಸಿ ಅಬ್ದುಲ್ಲಾ ಯಾನೆ ಗನಿ ಎಂಬವರ ಪುತ್ರ ಮುಹಮ್ಮದ್ ಶಾನವಾಝ್ (19) ಹಾಗೂ ಪಾದಚಾರಿ, ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ಅಳೀಸಸಂದ್ರದ ಶಿಕ್ಷಕಿ ಸುಶೀಲಮ್ಮ ಗಾಯಗೊಂಡವರು.

ಕಾರಿನಲ್ಲಿದ್ದ ಗಾಯಾಳುಗಳೆಲ್ಲ ಕಣ್ಣೂರು ನಿವಾಸಿಗಳಾಗಿದ್ದು, ಸಫ್ವಾನ್ ಕಾಲುಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಝಮ್ಮಿಲ್, ಮುಸ್ತಾಕ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನುಳಿದಂತೆ ಶಾನವಾಝ್, ಹಿದಾಯತುಲ್ಲಾ, ಶಾರ್ವಾನ್, ಮುಹಮ್ಮದ್ ಶಾಕೀರ್, ಸಲ್ಮಾನ್ ಫಾರೀಶ್, ಶಾನವಾಝ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ಇಮ್ತಿಯಾಝ್ ಮಂಗಳೂರು ನಗರದ ಬಂದರ್ ಪ್ರದೇಶದ ಮಾರ್ಕೆಟ್‌ನಲ್ಲಿ ಚಾಕೊಲೇಟ್ ಮಳಿಗೆಯನ್ನು ನಡೆಸುತ್ತಿದ್ದರು. ಇಮ್ತಿಯಾಝ್‌ಗೆ ಇಬ್ಬರು ಸಹೋದರಿಯರಿದ್ದು, ಓರ್ವ ಸಹೋದರನಿದ್ದಾನೆ. ಈತ ತಂದೆಗೆ ಕೊನೆಯ ಪುತ್ರ. ಇನ್ನೋರ್ವ ಮೃತ ಮುಹಮ್ಮದ್ ಶಾನವಾಝ್ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದರು. ಈತನಿಗೆ ಓರ್ವ ಸಹೋದರಿಯಿದ್ದಾರೆ.

ಘಟನೆ ವಿವರ: ಪ್ರವಾಸಕ್ಕೆಂದು ತೆರಳಲು ಕೆಲ ದಿನಗಳ ಹಿಂದೆಯೇ ಯೋಜನೆ ರೂಪಿಸಿದ್ದ ಕಣ್ಣೂರಿನ ಯುವಕರು ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟು ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದರು. ಅದರಂತೆ, ಸೋಮವಾರ ನಸುಕಿನಜಾವ 2 ಗಂಟೆಗೆ ಇನ್ನೋವಾ ಕಾರಿನಲ್ಲಿ ಒಟ್ಟು 11 ಯುವಕರು ಮಂಗಳೂರಿನ ಕಣ್ಣೂರಿನಿಂದ ಪ್ರಯಾಣ ಆರಂಭಿಸಿದ್ದಾರೆ. ಬೆಳಗ್ಗೆ ಸುಮಾರು 6-7 ಗಂಟೆಗೆ ಬೆಂಗಳೂರು-ಮಂಗಳೂರು ಹೆದ್ದಾರಿಯ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೇಳೂರು ಕ್ರಾಸ್  ಆದಿಚುಂಚನಗಿರಿಯ ಸಮೀಪ ಈ ಅವಘಡ ಸಂಭವಿಸಿದೆ.

ಇನ್ನೋವಾ ಕಾರಿನ ಟೈರ್ ಸಿಡಿದು ಕಾರು ನಿಯಂತ್ರಣ ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಡಾಬಾವೊಂದರ ಕಾಂಪೌಂಡ್‌ಗೆ ಢಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಮ್ತಿಯಾಝ್, ಮುಹಮ್ಮದ್ ಶಾನವಾಝ್ ಮೃತಪಟ್ಟಿದ್ದಾರೆ. ಇದೇ ಕಾರಿನಲ್ಲಿದ್ದ ಇನ್ನೂ ಎಂಟು ಯುವಕರು ಹಾಗೂ ಪಾದಚಾರಿ ಮಹಿಳೆ, ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ಅಳೀಸಸಂದ್ರದ ಶಿಕ್ಷಕಿ ಸುಶೀಲಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನೋರ್ವ ಯುವಕ ಸಫ್ವಾನ್ ಕಾಲುಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News