ಪಾಕಿಸ್ತಾನವು ಸೌದಿಗಳಿಗೆ ಪ್ರಿಯ ದೇಶ: ಸೌದಿ ಅರೇಬಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್

Update: 2019-02-18 15:13 GMT

ಇಸ್ಲಾಮಾಬಾದ್, ಫೆ. 18: ವಿವಿಧ ಕ್ಷೇತ್ರಗಳಲ್ಲಿ ಪಾಕಿಸ್ತಾನದೊಂದಿಗೆ ಭಾಗೀದಾರಿಕೆ ಹೊಂದಲು ಪ್ರಧಾನಿ ಇಮ್ರಾನ್ ಖಾನ್‌ರಂಥವರ ನಾಯಕತ್ವಕ್ಕಾಗಿ ನನ್ನ ದೇಶ ಕಾಯುತ್ತಿತ್ತು ಎಂದು ಪಾಕಿಸ್ತಾನ ಪ್ರವಾಸದಲ್ಲಿರುವ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

ಇಸ್ಲಾಮಾಬಾದ್ ‌ನ ಪ್ರಧಾನಿ ನಿವಾಸದಲ್ಲಿ ರವಿವಾರ ರಾತ್ರಿ ನಡೆದ ಭೋಜನಕೂಟದಲ್ಲಿ ಭಾಗವಹಿಸಿ ಮಾತನಾಡಿದ ಮುಹಮ್ಮದ್, ಪಾಕಿಸ್ತಾನವು ಎಲ್ಲ ಸೌದಿಗಳಿಗೆ ‘ಪ್ರಿಯ ದೇಶ’ವಾಗಿದೆ ಹಾಗೂ ಉಭಯ ದೇಶಗಳು ಕಠಿಣ ಹಾಗೂ ಒಳ್ಳೆಯ ಸಮಯಗಳಲ್ಲಿ ಜೊತೆಯಾಗಿ ನಡೆದಿವೆ ಎಂದು ಹೇಳಿದರು ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.

‘‘ಭವಿಷ್ಯದಲ್ಲಿ ಪಾಕಿಸ್ತಾನವು ತುಂಬಾ, ತುಂಬಾ ಮಹತ್ವದ ದೇಶವಾಗಲಿದೆ ಹಾಗೂ ಈ ಬೆಳವಣಿಗೆಯಲ್ಲಿ ನಾವು ಭಾಗೀದಾರರಾಗುತ್ತೇವೆ’’ ಎಂದು ಅವರು ನುಡಿದರು.

‘‘ಪಾಕಿಸ್ತಾನವು ಇಂದು ಶ್ರೇಷ್ಠ ನಾಯಕತ್ವವನ್ನು ಹೊಂದಿದ್ದು, ಉತ್ತಮ ಭವಿಷ್ಯವನ್ನು ಹೊಂದಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ನನ್ನ ದೇಶವು ಪಾಕಿಸ್ತಾನದೊಂದಿಗೆ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಭದ್ರತೆಯ ವಿಷಯದಲ್ಲಿ ಸಹಯೋಗ ಹೊಂದಲಿದೆ ಎಂದು ಸೌದಿ ಯುವರಾಜ ತಿಳಿಸಿದರು. ‘‘ನಮ್ಮ ವಲಯದ ಬಗ್ಗೆ ನಮಗೆ ನಂಬಿಕೆಯಿದೆ. ಹಾಗಾಗಿ, ನಾವು ಅದರಲ್ಲಿ ಹೂಡಿಕೆ ಮಾಡುತ್ತಿದ್ದೇವೆ’’ ಎಂದರು.

►1.43 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ

ಸೌದಿ ಅರೇಬಿಯ ಮತ್ತು ಪಾಕಿಸ್ತಾನಗಳು ರವಿವಾರ 20 ಬಿಲಿಯ ಡಾಲರ್ (ಸುಮಾರು 1.43 ಲಕ್ಷ ಕೋಟಿ ಭಾರತೀಯ ರೂಪಾಯಿ) ಮೊತ್ತದ ಹಲವಾರು ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಪಾಕಿಸ್ತಾನ ಪ್ರವಾಸದ ಮೊದಲ ದಿನದಂದು 7 ಒಪ್ಪಂದಗಳು ಮತ್ತು ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.

ಪಾಕಿಸ್ತಾನದ ಕುಸಿದ ಆರ್ಥಿಕತೆಗೆ ಈ ಹೂಡಿಕೆಗಳು ಜೀವ ತುಂಬಲಿವೆ ಎಂಬ ವಿಶ್ವಾಸವನ್ನು ಆ ದೇಶದ ನಾಯಕರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಬಳಿಕ, ಸೌದಿ ಯುವರಾಜ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮಂಗಳವಾರ ಮತ್ತು ಬುಧವಾರ ಅವರು ಭಾರತ ಪ್ರವಾಸದಲ್ಲಿರುತ್ತಾರೆ.

ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಭಾರೀ ಉದ್ವಿಗ್ನತೆಯ ನಡುವೆಯೇ ಸೌದಿ ಯುವರಾಜನ ಭೇಟಿ ಏರ್ಪಟ್ಟಿದೆ.

►ಸೌದಿಯಲ್ಲಿರುವ 2,107 ಪಾಕ್ ಕೈದಿಗಳ ಬಿಡುಗಡೆ

ಸೌದಿ ಅರೇಬಿಯದ ಜೈಲುಗಳಲ್ಲಿರುವ 2,107 ಪಾಕಿಸ್ತಾನಿ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದಾರೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಫವಾದ್ ಚೌಧರಿ ಸೋಮವಾರ ಪ್ರಕಟಿಸಿದ್ದಾರೆ.

ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಕಾರ್ಮಿಕರು ಎದುರಿಸುತ್ತಿರುವ ಸಂಕರ್ಷಗಳ ಬಗ್ಗೆ ಗಮನ ಹರಿಸುವಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರವಿವಾರ ರಾತ್ರಿ ಸೌದಿ ಯುವರಾಜನಿಗೆ ವಿಶೇಷ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News