ಲೋಕಸಭೆ ಚುನಾವಣೆ: ಫೆಬ್ರವರಿ ಅಂತ್ಯದೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ

Update: 2019-02-18 16:28 GMT

 ಹೈದರಾಬಾದ್, ಫೆ.18: ಟಿಕೆಟ್ ಹಂಚಿಕೆ ವಿಷಯದಲ್ಲಿ ಪಕ್ಷದೊಳಗೆ ಒಳಜಗಳವನ್ನು ತಡೆಯುವ ಉದ್ದೇಶದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕಾಂಗ್ರೆಸ್ ಪಕ್ಷವು ರಾಜ್ಯ ಘಟಕಗಳಿಗೆ ಸೂಚಿಸಿದೆ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಅಂತಃಕಲಹ ಭುಗಿಲೆದ್ದಿತ್ತು. ಅಸಮಾಧಾನಗೊಂಡಿದ್ದ ಹಲವು ಮುಖಂಡರು ಪ್ರತಿಭಟನೆ ನಡೆಸಿದ್ದರು ಮತ್ತು 12ಕ್ಕೂ ಹೆಚ್ಚು ಮಂದಿ ಪಕ್ಷೇತರರಾಗಿ ಕಣಕ್ಕಿಳಿದು ಪಕ್ಷದ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರು. ಇಂತಹ ಪರಿಸ್ಥಿತಿ ಮರುಕಳಿಸುವುದನ್ನು ತಡೆಯಲು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಈ ತಿಂಗಳಾಂತ್ಯದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಟಿಕೆಟ್ ಹಂಚಿಕೆ ಎಂಬುದು ವಿವಾದಕ್ಕೆ ಎಡೆ ಮಾಡಿಕೊಡುವ ಪ್ರಕ್ರಿಯೆಯಾಗಿದೆ.

ಆದರೆ ಈ ಬಾರಿ , ರಾಜ್ಯ ಘಟಕಗಳು ಶಿಫಾರಸು ಮಾಡಿರುವ ಹೆಸರುಗಳು ಅನುಮೋದನೆಗೊಂಡ ಬಳಿಕವೇ ಟಿಕೆಟ್ ಹಂಚಿಕೆ ಅಂತಿಮಗೊಳ್ಳಲಿದೆ. ಎಲ್ಲಾ ರಾಜ್ಯ ಘಟಕಗಳೂ ಫೆಬ್ರವರಿ ಅಂತ್ಯದೊಳಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಮಾರ್ಚ್ ಅಂತ್ಯದೊಳಗೆ ಎಲ್ಲಾ ಅಭ್ಯರ್ಥಿಗಳ ಹೆಸರನ್ನೂ ಘೋಷಿಸುವ ಮೂಲಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಗುವಂತೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಈ ಬಾರಿ ರಾಜ್ಯ ಘಟಕಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಅಲ್ಲದೆ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕಿರುವ ಸ್ಥಳೀಯ ಮಹತ್ವದ ವಿಷಯಗಳು ಹಾಗೂ ಕೇಂದ್ರ ವಿಷಯದ ಕುರಿತು ಪ್ರತಿಕ್ರಿಯೆಯನ್ನೂ ರಾಜ್ಯ ಘಟಕಗಳು ಒದಗಿಸಬೇಕಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರು, ಉದ್ಯೋಗ, ಮಹಿಳಾ ಮೀಸಲಾತಿ ಮಸೂದೆ ಹಾಗೂ ಅಗತ್ಯ ವಸ್ತುಗಳ ಕುರಿತು ಆದ್ಯತೆ ನೀಡಲಾಗುವುದು . ರಫೇಲ್ ವಿಮಾನ ಪ್ರಕರಣ, ನೋಟು ರದ್ದತಿಯಿಂದ ಆದ ಅನಾನುಕೂಲಗಳ ವಿಷಯವನ್ನೂ ಪ್ರಚಾರಕಾರ್ಯದಲ್ಲಿ ಬಳಸುವಂತೆ ಕೆಲವು ಮುಖಂಡರು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಲ್ಲಿ ಪ್ರಮುಖ ನಾಯಕರಾದ ಪಿ.ಚಿದಂಬರಂ, ಜೈರಾಂ ರಮೇಶ್, ಸಲ್ಮಾನ್ ಖುರ್ಷಿದ್, ಶಶಿ ಥರೂರ್ , ಸ್ಯಾಮ್ ಪಿತ್ರೋಡ ಹಾಗೂ ಇತರರು ಇದುವರೆಗೆ 55 ನಗರಗಳಲ್ಲಿ 176 ಸಭೆಗಳನ್ನು ನಡೆಸಿದ್ದು ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವ ವಿಷಯಗಳ ಬಗ್ಗೆ ಜನರ ಪ್ರತಿಕ್ರಿಯೆಯನ್ನು ಆಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಮುಖ ಚುನಾವಣಾ ಭರವಸೆಯಾಗಿರುವ ‘ಕನಿಷ್ಟ ಆದಾಯ ಖಾತರಿ’ ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾಗಿದೆ. ಕನಿಷ್ಟ ಆದಾಯ ಖಾತರಿ ಯೋಜನೆಯನ್ನು ವಿವರಿಸಲು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಹಿತ ಪ್ರಮುಖ ಅರ್ಥಶಾಸ್ತ್ರಜ್ಞರ ಸಲಹೆ ಪಡೆದು ತಯಾರಿಸಲಾಗಿರುವ ನೀಲನಕ್ಷೆಯನ್ನೂ ಪ್ರಣಾಳಿಕೆ ಹೊಂದಿರುತ್ತದೆ. ಪಕ್ಷದ ಮಹಿಳಾ ಘಟಕ, ವಿದ್ಯಾರ್ಥಿ ಘಟಕ, ಯುವ ಘಟಕದ ಜೊತೆಗೆ ತೃತೀಯ ಲಿಂಗಿಗಳ ಹಕ್ಕುಗಳ ಕುರಿತಾದ ಅಭಿಪ್ರಾಯಗಳಿಗೂ ಕಾಂಗ್ರೆಸ್ ಆದ್ಯತೆ ನೀಡುತ್ತಿದ್ದು ಅಪ್ಸರಾ ರೆಡ್ಡಿಯನ್ನು ಕಾಂಗ್ರೆಸ್‌ನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಅಲ್ಲದೆ ಅಂತರ್ಜಾಲ ಬಳಕೆದಾರರಿಂದ ಸಲಹೆ ಸೂಚನೆ ಪಡೆಯಲೆಂದೇ ವಿಶೇಷ ವೆಬ್‌ಸೈಟ್ ಆರಂಭಿಸಲಾಗಿದೆ. ಫೆ.26ರಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯು ಗುಜರಾತ್‌ನಲ್ಲಿ ನಡೆಯಲಿದ್ದು ರಾಹುಲ್ ಗಾಂಧಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ , ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News