ಝರೀನ, ಮಂಜು ರಾಣಿ, ಮೀನಾ ಫೈನಲ್‌ಗೆ

Update: 2019-02-18 18:01 GMT

ಹೊಸದಿಲ್ಲಿ, ಫೆ.18: ಬಲ್ಗೇರಿಯದ ಸೋಫಿಯದಲ್ಲಿ ನಡೆಯುತ್ತಿರುವ 70ನೇ ಆವೃತ್ತಿಯ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಮಂಜು ರಾಣಿ, ಮೀನಾ ಕುಮಾರಿ ದೇವಿ ಹಾಗೂ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಝರೀನ ಫೈನಲ್‌ಗೆ ತಲುಪಿದ್ದಾರೆ.

ಸೋಮವಾರ ಇಲ್ಲಿ ನಡೆದ 51 ಕೆಜಿ ವಿಭಾಗದ ತೀವ್ರ ಪೈಪೋಟಿ ಕೂಡಿದ ಸೆಮಿ ಫೈನಲ್ ಪಂದ್ಯದಲ್ಲಿ ಝರೀನ ಪೊಲೆಂಡ್‌ನ ಸಾಂಡ್ರಾ ಡ್ರಾಬಿಕ್‌ರನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿದರು.

ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕ ಜಯಿಸಿರುವ ಝರೀನ ಚುರುಕಿನ ಪಾದ ಚಲನೆ ಹಾಗೂ ಬಲಿಷ್ಠ ಪಂಚ್‌ನ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಮಂಜು ರಾಣಿ(48 ಕೆಜಿ) ಹಾಗೂ ಮೀನಾ ಕುಮಾರಿ ದೇವಿ(54 ಕೆಜಿ)ಕೂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ರಾಣಿ ಬಲ್ಗೇರಿಯದ ಎಮಿ-ಮರಿ ಟೊಡೊರೊವಾರನ್ನು ಸೋಲಿಸಿದರೆ, ದೇವಿ ರಶ್ಯದ ಎಕಟೆರಿನಾ ಸಿಚೆವಾರನ್ನು ಸೋಲಿಸಿದರು.

ಪುರುಷರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್(49 ಕೆಜಿ)ಮಾತ್ರ ಭಾರತದ ಸವಾಲನ್ನು ಮುನ್ನಡೆಸುತ್ತಿದ್ದಾರೆ. ಅಮಿತ್ ರವಿವಾರ ಟೂರ್ನಿಯ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಕಳೆದ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಚಿನ್ನ ಸಹಿತ ಒಟ್ಟು 11 ಪದಕಗಳನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News