ಮಂಡಳಿ ಅಧ್ಯಕ್ಷರ ಇಲೆವೆನ್‌ಗೆ ಸೋಲು

Update: 2019-02-18 18:07 GMT

ಮುಂಬೈ, ಫೆ.18: ಎಡಗೈ ಮಧ್ಯಮ ವೇಗಿ ಕೋಮಲ್ ಝಾಂಝಡ್ ಮೂರು ವಿಕೆಟ್ ಪಡೆದು ಮಿಂಚಿದರೂ ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವೆನ್ ಮಹಿಳಾ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸೋಮವಾರ 2 ವಿಕೆಟ್‌ಗಳ ಸೋಲು ಅನುಭವಿಸಿತು. ಇನ್ನೂ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗದ ಕೋಮಲ್, ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಬೆನ್ನೆಲುಬು ಮುರಿದರು. ಪಂದ್ಯದಲ್ಲಿ 6 ಓವರ್‌ಗಳ ಬೌಲಿಂಗ್ ಮಾಡಿದ ಅವರು 9 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಂಡಳಿ ಅಧ್ಯಕ್ಷರ ಇಲೆವೆನ್ 49 ಓವರ್‌ಗಳಲ್ಲಿ 154 ರನ್ ಗಳಿಸಿ ಸರ್ವಪತನ ಕಂಡಿತು. ಕೆಳ ಕ್ರಮಾಂಕದ ಬ್ಯಾಟ್ಸ್‌ವುಮನ್ ಮಿನ್ನು ಮಣಿ 57 ಎಸೆತಗಳಲ್ಲಿ 28 ರನ್ ಗಳಿಸಿದ್ದೇ ಮಂಡಳಿ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸ್ಮತಿ ಮಂಧಾನಾ 15 ಎಸೆತಗಳಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತಿ ಫುಲ್ಮಾಲಿ(23), ಪ್ರಿಯಾ ಪೂನಿಯ(15) ಹಾಗೂ ಹರ್ಲಿನ್ ಡಿಯೊಲ್(21) ಅಲ್ಪ ಕಾಣಿಕೆ ನೀಡಿದರು. ಇಂಗ್ಲೆಂಡ್ ಪರ ಅನ್ಯಾ ಶ್ರಬ್ಸೋಲ್ 30ಕ್ಕೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಜಾರ್ಜಿಯಾ ಎಲ್ವಿಸ್(20ಕ್ಕೆ2) ಅವರಿಗೆ ಸಾಥ್ ನೀಡಿದರು. ಸಾಧಾರಣ ಗೆಲುವಿನ ಗುರಿ ಬೆಂಬತ್ತಿದ ಇಂಗ್ಲೆಂಡ್ ಒಂದು ಹಂತದಲ್ಲಿ 11 ರನ್‌ಗೆ 4 ವಿಕೆಟ್ ಕಳೆದುಕೊಂಡು ತೀರ ಸಂಕಷ್ಟದಲ್ಲಿತ್ತು. ಈ ವೇಳೆ ಹೀದರ್ ನೈಟ್ ಪ್ರವಾಸಿಗರ ಇನಿಂಗ್ಸ್‌ಗೆ ಜೀವ ತುಂಬಿದರು. 86 ಎಸೆತಗಳಲ್ಲಿ ಅವರು ಗಳಿಸಿದ ಅಜೇಯ 64 ರನ್ ಗೆಲುವನ್ನು ಖಚಿತಪಡಿಸಿತು. ಲಾರೆನ್ ವಿನ್‌ಫೀಲ್ಡ್ (ಅಜೇಯ 23), ಶ್ರಬ್ಸೋಲ್(23) ಹಾಗೂ ಡ್ಯಾನಿಲ್ಲೆ ವ್ಯಾಟ್(22) ಇಂಗ್ಲೆಂಡ್ ಗೆಲುವನ್ನು ಸುಲಭವಾಗಿಸಿದರು. ಇಂಗ್ಲೆಂಡ್ 37.3 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಭಾರತದ ಪರ ಕೋಮಲ್(14ಕ್ಕೆ 3), ರೀಮಾಲಕ್ಷ್ಮೀ ಎಕ್ಕಾ(24ಕ್ಕೆ 2) ಹಾಗೂ ತನುಜಾ ಕನ್ವರ್(34ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News