ಹುಬ್ಬಳ್ಳಿಯಲ್ಲಿ ಧ್ವಜಾರೋಹಣಗೈದವರ ಮೇಲೆ ಕೇಸು: ಪಾಪ್ಯುಲರ್ ಫ್ರಂಟ್ ಖಂಡನೆ

Update: 2019-02-19 06:32 GMT

ಬೆಂಗಳೂರು, ಫೆ. 19: ಹುಬ್ಬಳ್ಳಿಯ ಕಟಗರ ಎಂಬಲ್ಲಿ ಪಾಪ್ಯುಲರ್ ಫ್ರಂಟ್ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸಂಘಟನೆಯ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದ ನಾಲ್ಕು ಮಂದಿ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿರುವ ಪೊಲೀಸರ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಖಂಡಿಸಿದ್ದಾರೆ.

2007ರ ಫೆಬ್ರವರಿ 17ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ದಿನದ ಪ್ರಯುಕ್ತ ಪ್ರತಿ ವರ್ಷವೂ ಫೆಬ್ರವರಿ 17ರಂದು ಸಂಘಟನೆಯ ಸಂಸ್ಥಾಪನಾ ದಿನವನ್ನು ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ಹಲವು ಕಡೆ ಧ್ವಜಾರೋಹಣದಂತಹ ಕಾರ್ಯಕ್ರಮ ಮತ್ತು ಆಯ್ದ ಕೆಲವು ಪ್ರದೇಶದಲ್ಲಿ ಬೃಹತ್ ಸಮಾವೇಶ, ರಾಲಿಯನ್ನೂ ನಡೆಸಲಾಗಿದೆ. ಆದರೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಸಂಘಟನೆಯ ನಾಲ್ಕು ಮಂದಿ ಕಾರ್ಯಕರ್ತರನ್ನು ಧ್ವಜಾರೋಹಣ ಮಾಡಿದ ನೆಪ ಒಡ್ಡಿ ಬಂಧಿಸಿ ಕೇಸು ದಾಖಲಿಸಿರುವುದು ಸಂಪೂರ್ಣ ಅಧಿಕಾರದ ದುರ್ಬಳಕೆಯಾಗಿರುತ್ತದೆ. ಈ ಹಿಂದೆಯೂ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಸಿದಾಗಲೂ ಪೊಲೀಸರು ಅಡ್ಡಿಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಹಿಂದೆ ಕೋಮು ಉದ್ವಿಗ್ನತೆಗೆ ಸಂಘಪರಿವಾರ ಶಕ್ತಿಗಳು ಯತ್ನಿಸಿದಾಗ ಯಾವುದೇ ಕ್ರಮ ತೆಗೆದುಕೊಂಡಿರದ ಪೊಲೀಸರು ಈ ರೀತಿಯಾಗಿ ಪಕ್ಷಪಾತಿಯಾಗಿ ವರ್ತಿಸುತ್ತಿರುವುದು ಕಾನೂನು ವಿರುದ್ಧವಾಗಿದೆ. ಶೋಷಿತ ಮತ್ತು ಹಿಂದುಳಿದವರ ಧ್ವನಿಯನ್ನು ಹತ್ತಿಕ್ಕುವುದು ಫ್ಯಾಷಿಷ್ಟ್ ಧೋರಣೆಯಾಗಿರುತ್ತದೆ. ಸಾಮಾಜಿಕ ನ್ಯಾಯದ ಪುನರ್ ಸ್ಥಾಪನೆಗಾಗಿ ಜನಾಂದೋಲನ ನಡೆಸುತ್ತಿರುವ ಪಾಪ್ಯುಲರ್ ಫ್ರಂಟ್ ನ ಧ್ವಜವು ಪೊಲೀಸರಿಗೆ ಫ್ಯಾಷಿಸ್ಟರ ಮಾರಕಾಸ್ತ್ರಗಳಿಗಿಂತಲೂ ಅಪಾಯಕಾರಿಯಾಗಿ ಕಂಡಿರುವುದು ವಿಪರ್ಯಾಸ ಎಂದು ಅವರು ಹೇಳಿದರು.

ಸರಕಾರ ತತ್ ಕ್ಷಣ ಮಧ್ಯೆ ಪ್ರವೇಶಿಸಿ ಹುಬ್ಬಳ್ಳಿ ಪೋಲೀಸರ ತಾರತಮ್ಯ ನೀತಿಯ ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದು, ಒಂದು ವೇಳೆ ಹುಬ್ಬಳ್ಳಿ ಪೊಲೀಸರ ಈ ದೋರಣೆ ಮುಂದುವರಿದಲ್ಲಿ ಅದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿಯೂ ಅಬ್ದುಲ್ ರಝಾಕ್ ಕೆಮ್ಮಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News