‘ನಿಮ್ಮ ವೈಫಲ್ಯಕ್ಕೆ ನಮ್ಮ ಕಾಲೆಳೆಯಲು ಬರಬೇಡಿ’

Update: 2019-02-19 07:15 GMT

ಮಂಗಳೂರು, ಫೆ.19: ರಾ.ಹೆ.66ರ ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ಮಾಜಿ ಶಾಸಕ ಜೆ.ಆರ್.ಲೋಬೊ ಅವರ ಸ್ವಸಮುದಾಯದ ಮೇಲಿನ ಪ್ರೀತಿಯೇ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜೆ.ಆರ್.ಲೋಬೊ ‘ನಿಮ್ಮ ವೈಫಲ್ಯಕ್ಕೆ ನಮ್ಮ ಕಾಲೆಳೆಯಲು ಬರಬೇಡಿ’ ಎಂದು ತಿರುಗೇಟು ನೀಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಜೆ.ಆರ್.ಲೋಬೊ ಸಂಸದ ನಳಿನ್ ಕುಮಾರ್ ಕಟೀಲ್ ಕಳೆದ 10 ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಏನೇನೂ ಕೊಡುಗೆ ನೀಡಿಲ್ಲ. ಹೊಸ ಯೋಜನೆ ಬಿಡಿ, ಹಳೆಯ ಯೋಜನೆಗಳಿಗೆ ಪುನರುಜ್ಜೀವನ ನೀಡಲೂ ವಿಫಲರಾಗಿದ್ದಾರೆ. ತನ್ನ ಈ ವೈಫಲ್ಯವನ್ನು ಮರೆಮಾಚಲು ಮತ್ತು ಮುಂದಿನ ಚುನಾವಣೆಯ ದೃಷ್ಟಿಕೋನದಿಂದ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತಲು ನೋಡುತ್ತಿದ್ದಾರೆ.

ಜಿಲ್ಲೆಗೆ ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರಾಗಿರುವ ಅವರು ನೇರ ರಾಜಕೀಯ ಮಾಡುವ ಬದಲು ಮತ-ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಅವರ ಈ ಯೋಜನೆ ಯಶಸ್ವಿಯಾಗದು. ಅವರ ವೈಫಲ್ಯವನ್ನು ಜನರ ಮುಂದಿಟ್ಟು ಜಾಗೃತಿಗೊಳಿಸಲಾಗುವುದು ಎಂದಿದ್ದಾರೆ.

ನಾನು ಮತ್ತು ಯು.ಟಿ.ಖಾದರ್ ಈ ಎರಡು ಮೇಲ್ಸೇತುವೆ ವಿಳಂಬಕ್ಕೆ ಕಾರಣರು ಆಗಿದ್ದರೆ ಸಂಸದ ನಳಿನ್‌ಗೆ ಈಗ ಅದು ಗೋಚರವಾಯಿತೇ ? ಇವಿಷ್ಟು ವರ್ಷ ಅವರಿಗೆ ಗೊತ್ತಾಗಿರಲಿಲ್ಲವೇ ? ಅದು ಬಿಡಿ, ಒಬ್ಬ ಸಂಸದನಾಗಿ ರಾ.ಹೆ. ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಎಂಬ ನೆಲೆಯಲ್ಲಿ ನಮ್ಮನ್ನು ಎಷ್ಟು ಬಾರಿ ಅವರು ಸಭೆಗೆ ಕರೆದಿದ್ದಾರೆ ? ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಗೆ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಬೆದರಿಸಿದರೆ ಅದು ಅವರ ಸಾಧನೆ ಎಂದು ಜನರು ತಿಳಿದುಕೊಳ್ಳಬೇಕೇ ? ಎಂದು ಜೆ.ಆರ್.ಲೋಬೊ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಸುರೇಶ್ ಬಲ್ಲಾಳ್, ಮುಹಮ್ಮದ್ ಸಲೀಂ, ಟಿ.ಕೆ. ಸುಧೀರ್, ಮರಿಯಮ್ಮ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News