ಅಲ್ಪಸಂಖ್ಯಾತ ವಿರೋಧಿ ಸೊರಕೆಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆ ಮತ ನೀಡುವ ಬಗ್ಗೆ ಪುನರ್ ವಿಮರ್ಶೆ

Update: 2019-02-19 10:07 GMT

ಮಂಗಳೂರು, ಫೆ.19: ಮುಂದಿನ ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಿಂದ ಅಲ್ಪಸಂಖ್ಯಾತ ವಿರೋಧಿ ವಿನಯ ಕುಮಾರ್ ಸೊರಕೆಯವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಗ್ಗೆ ಪುನರ್ ವಿಮರ್ಶಿಸಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಎಚ್ಚರಿಸಿದ್ದಾರೆ..

ವಿನಯ ಕುಮಾರ್ ಸೊರಕೆಯವರು ಈ ಹಿಂದೆ ಕಾಪು ಕ್ಷೇತ್ರ ಮತ್ತು ಉಡುಪಿ ಕ್ಷೇತ್ರದಿಂದ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಮತಗಳ ಬೆಂಬಲದಿಂದ ಜಯಗಳಿಸಿದ್ದರು. ಆದರೆ ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ನಗರಸಭೆ ಚುನಾವಣೆಗಳಲ್ಲಿ ಮುಸ್ಲಿಮರು ಮತ್ತು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದ್ದರು. ಈ ಮೂಲಕ ನಿರಂತರ ರಾಜಕೀಯ ಪ್ರಾತಿನಿಧ್ಯದಿಂದ ಅಲ್ಪಸಂಖ್ಯಾತರನ್ನು ದೂರವಿರಿಸಲು ಯತ್ನಿಸಿದ್ದರು. ಅಲ್ಪ ಸಂಖ್ಯಾತ ಸಮುದಾಯದಕ್ಕೆ ರಾಜಕೀಯ ಅಸ್ತಿತ್ವವೇ ಇಲ್ಲದಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಒಕ್ಕೂಟವು ಆರೋಪಿಸಿದೆ.

ಮುಸ್ಲಿಮರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಇತರರು ಮತ ಹಾಕುವುದಿಲ್ಲ ಮತ್ತು ಮುಸ್ಲಿಮ್ ಅಭ್ಯರ್ಥಿಗಳು ಜಯ ಗಳಿಸುವುದಿಲ್ಲ ಎಂಬಿತ್ಯಾದಿ ಬಾಲಿಶ ಹೇಳಿಕೆಗಳನ್ನು ಸೊರಕೆ ನೀಡಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಿಂದ ವಿನಯ ಕುಮಾರ್ ಸೊರಕೆಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ವಿನಯ ಕುಮಾರ್ ಸೊರಕೆಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ದ.ಕ. ಜಿಲ್ಲೆಯ ಮುಸ್ಲಿಮರು ಕಾಂಗ್ರೆಸ್ ಗೆ ಮತ ನೀಡುವ ಬಗ್ಗೆ ಪುನರ್ ವಿಮರ್ಶಿಸಬೇಕಾಗುತ್ತದೆ ಎಂದು ಒಕ್ಕೂಟವು ತಿಳಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಮ್ ಅಲ್ಪಸಂಖ್ಯಾತ ಜನಪ್ರತಿನಿಧಿಗಳು ಮತ್ತು ಮುಖಂಡರು ಈ ಬಗ್ಗೆ ಶೀಘ್ರ ತಮ್ಮ ನಿಲುವು ವ್ಯಕ್ತ ಪಡಿಸಬೇಕೆಂದು ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News