ಫೆ. 28: ಸುರತ್ಕಲ್ ಅಕ್ರಮ ಟೋಲ್ಗೇಟ್ ಮುಂದೆ ಜನಾಗ್ರಹ ಸಭೆ

Update: 2019-02-19 10:49 GMT

ಮಂಗಳೂರು, ಫೆ.19: ಸುರತ್ಕಲ್ನಲ್ಲಿರುವ ಅಕ್ರಮ ಟೋಲ್ಗೇಟ್ ಮುಚ್ವುವ ವಿಷಯದಲ್ಲಿ ಜಿಲ್ಲಾಡಳಿತ, ಸಂಸದರು, ಹೆದ್ದಾರಿ ಪ್ರಾಧಿಕಾರದ ಮೇಲೆ ಜನರಿಟ್ಟಿದ್ದ ಭರವಸೆ ಹುಸಿಯಾಗಿರುವುದರಿಂದ ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಫೆ. 28ರಂದು ಬೆಳಗ್ಗೆ 10:30ಕ್ಕೆ ಎನ್‌ಐಟಿಕೆ ಟೋಲ್‌ಗೇಟ್ ಮುಂದೆ ಜನಾಗ್ರಹ ಸಭೆ ನಡೆಸಲಿದೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.

ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೋರಾಟ ಸಮಿತಿ ನಡೆಸಿದ 11 ದಿನಗಳ ಹಗಲು-ರಾತ್ರಿ ಧರಣಿಯ ಸಂದರ್ಭ ಅಕ್ರಮ ಟೋಲ್ಗೇಟ್ ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿ, ನ್ಯಾಯ ಒದಗಿಸುವ ಸ್ಪಷ್ಟ ಭರವಸೆ ನೀಡಲಾಗಿತ್ತು. ಆದರೆ ಸಂಬಂಧಪಟ್ಟವರು ಮೂರು ತಿಂಗಳಾದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸುರತ್ಕಲ್‌ನಲ್ಲಿ ಅಕ್ರಮ ಟೋಲ್ ಸಂಗ್ರಹ ಪ್ರಕ್ರಿಯೆ ಮುಂದುವರಿದಿದೆ. ಅಲ್ಲದೆ ಮಾ.1ರಿಂದ ಸ್ಥಳೀಯ ಖಾಸಗಿ ವಾಹನಗಳಿಗೆ ನೀಡಲಾಗಿದ್ದ ರಿಯಾಯತಿಯನ್ನು ರದ್ದುಗೊಳಿಸಿ ಟೋಲ್ ಕಡ್ಡಾಯ ಪಾವತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹಾಗಾಗಿ ನಿಯಮ ಉಲ್ಲಂಘಿಸಿ ಜನತೆಯನ್ನು ಲೂಟಿಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಕೂಳೂರು ಸೇತುವೆಯು ಸಂಚಾರಕ್ಕೆ ಯೋಗ್ಯವಲ್ಲ ಎಂದು ಘೋಷಿಸಿ ಒಂದು ವರ್ಷವಾದರೂ ಕೂಡ ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಪ್ರಕ್ರಿಯೆ ನಡೆದಿಲ್ಲ್ಲ. ಈ ಸಮಸ್ಯೆಗಳ ಕುರಿತು ಜವಾಬ್ದಾರಿ ಹೊಂದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಇತರ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈ ಕುರಿತು ಮಾತು ತಪ್ಪಿದ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಮತ್ತು ಅಕ್ರಮ ಟೋಲ್ಗೇಟ್ ಮುಚ್ಚಲು, ಸ್ಥಳೀಯರಿಗೆ ಸುಂಕ ವಿಧಿಸುವ ತೀರ್ಮಾನವನ್ನು ಕೈ ಬಿಡಲು, ಕೂಳೂರಿನ ನೂತನ ಸೇತುವೆಯ ನಿರ್ಮಾಣ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ಒತ್ತಾಯಿಸಿ ಜನಾಗ್ರಹ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಸುರತ್ಕಲ್ ಪರಿಸರದ ಜನರ ಪ್ರತಿಭಟನೆಯ ನಡುವೆ ಮೂರು ತಿಂಗಳ ನಂತರ ಹೆಜಮಾಡಿ ಟೋಲ್ಗೇಟ್‌ನಲ್ಲಿ ವಿಲೀನಗೊಳಿಸುವ ಒಪ್ಪಂದದಂತೆ ತಾತ್ಕಾಲಿಕ ನೆಲೆಯಲ್ಲಿ 2016ರಲ್ಲಿ ಎನ್‌ಐಟಿಕೆ ಸಮೀಪ ಟೋಲ್ ಕೇಂದ್ರವನ್ನು ಆರಂಭಿಸಲಾಯಿತು. ಆದರೆ 9 ಕಿ.ಮೀ. ದೂರದ ಹೆಜಮಾಡಿಯಲ್ಲಿ ಟೋಲ್ ಕೇಂದ್ರ ಆರಂಭಗೊಂಡು ತಿಂಗಳುಗಳು ಉರುಳಿದರೂ ಕೂಡ ನಿಯಮದಂತೆ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚದೆ ಅಕ್ರಮವಾಗಿ ಟೋಲ್ ಸಂಗ್ರಹವನ್ನು ಮುಂದುವರಿಸಲಾಯಿತು. ಈ ಅಕ್ರಮದ ವಿರುದ್ದ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಕಳೆದ ಎರಡು ವರ್ಷದಿಂದ ಸತತವಾಗಿ ಹೋರಾಟ ನಡೆಸಿದ ಪರಿಣಾಮ ಹೆದ್ದಾರಿ ಪ್ರಾಧಿಕಾರವು ಎನ್‌ಐಟಿಕೆ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನವನ್ನು ಕೈಗೊಂಡಿತು. ಅಲ್ಲದೆ 2018ರ ಜನವರಿ 3 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ರಾಜ್ಯ ಸರಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿತು. ಇಷ್ಟಾದರೂ ಟೋಲ್ ಕೇಂದ್ರವನ್ನು ಸ್ಥಳಾಂತರಿಸದೆ ತಾತ್ಕಾಲಿಕ ನೆಲೆಯಲ್ಲಿ ಟೋಲ್ಸಂಗ್ರಹ ಗುತ್ತಿಗೆಯನ್ನು ನವೀಕರಿಸುತ್ತಾ ಬರುತ್ತಿದೆ. ಈ ಅನ್ಯಾಯ, ಅಕ್ರಮ ಸುಂಕ ಸಂಗ್ರಹ ವಿರೋಧಿಸಿ, ಸರ್ವಿಸ್ ರಸ್ತೆಗಳ ನಿರ್ಮಾಣ, ರಸ್ತೆಗಳ ದುರಸ್ತಿ, ಕೂಳೂರು ನೂತನ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಕಳೆದ ಅಕ್ಟೋಬರ್ 22ರಿಂದ ಸುರತ್ಕಲ್ನಲ್ಲಿ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲಾಯಿತು.ಅವಳಿ ಜಿಲ್ಲೆಗಳ ಸಂಘಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು, ಜನತೆಯ ವ್ಯಾಪಕ ಬೆಂಬಲದಿಂದ ಧರಣಿಯು ಜನಾಂದೋಲನವಾಗಿ ಪರಿವರ್ತನೆಯಾಗಿತ್ತು. ಈ ಸಂದರ್ಭ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರಕಾರದ ಮಟ್ಟದಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆ ಕರೆದು ಅಕ್ರಮ ಟೋಲ್ಗೇಟ್ ಸಮಸ್ಯೆ ಇತ್ಯರ್ಥಗೊಳಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿ ಧರಣಿಯನ್ನು ಹಿಂಪಡೆಯುವಂತೆ ವಿನಂತಿಸಿದ್ದರು. ಆವಾಗ ಸಂಸದರು ಕೂಡ ವಿಲೀನದ ಬದಲಿಗೆ ಟೋಲ್ ಕೇಂದ್ರವನ್ನೇ ರದ್ದುಗೊಳಿಸಲಾಗುವುದು ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದರು. ಧರಣಿ ಹಿಂಪಡೆದ ನಂತರ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮಾತುಕೊಟ್ಟಂತೆ ರಾಜ್ಯ ಸರಕಾರ ಮಟ್ಟದಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆಯನ್ನು ಇದುವರೆಗೆ ನಡೆಸಲಿಲ್ಲ. ಸಂಸದರು ಕೂಡ ವೌನ ತಾಳಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ಹೋರಾಟ ಸಮಿತಿಯ ಮುಖಂಡರಾದ ಮೂಸಬ್ಬ ಪಕ್ಷಿಕೆರೆ, ದಿನೇಶ್ ಕುಂಪಲ, ರಾಘವೇಂದ್ರ ರಾವ್, ಬಿ.ಕೆ. ಇಮ್ತಿಯಾಝ್, ರಹೀಂ ಪಕ್ಷಿಕೆರೆ, ರಘು ಎಕ್ಕಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News