ವಿಶ್ವ ಒಲಂಪಿಕ್ಸ್‌ಗೆ ಮಂಗಳೂರಿನ 4 ವಿಶೇಷ ಮಕ್ಕಳು ಆಯ್ಕೆ

Update: 2019-02-19 12:56 GMT

ಮಂಗಳೂರು, ಫೆ.19: ಅಬುಧಾಬಿಯಲ್ಲಿ ಮಾ.14ರಿಂದ 22ರ ವರೆಗೆ ನಡೆಯಲಿರುವ ವಿಶ್ವ ವಿಶೇಷ ಒಲಂಪಿಕ್ಸ್‌ಗೆ ಮಂಗಳೂರಿನಿಂದ ನಾಲ್ವರು ಮಕ್ಕಳು ಆಯ್ಕೆಯಾಗಿದ್ದಾರೆ.

ನಗರದ ಬೆಂದೂರ್‌ನ ಸಂತ ಆಗ್ನೆಸ್ ವಿಶೇಷ ಶಾಲೆಯ ಆಸ್ಲಿ ಡಿಸೋಜ ಮತ್ತು ನಿಜಾಮುದ್ದೀನ್ ಹಾಗೂ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ಅಭಿಲಾಷ್ ಬಿ. ಹಾಗೂ ಪ್ರಜ್ವಲ್ ಲೋಬೊ ಆಯ್ಕೆಯಾದವರು. ಈ ಪೈಕಿ ನಿಜಾಮುದ್ದೀನ್ ಭಾರತ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಲಿದ್ದು, ಉಳಿದವರು ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ.ವಸಂತ್ ಕುಮಾರ್ ಶಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಲಿ ಡಿಸೋಜ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ, ಕೋಲಾಪುರದಲ್ಲಿ 3 ಚಿನ್ನ, ಭೋಪಾಲದಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಯಶಸ್ವಿಯಾಗಿ ಒಲಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾನೆ. ಅಭಿಲಾಷ್ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, ಕೋಲಾಪುರದಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಪ್ರಜ್ವಲ್ ಲೋಬೊ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, ಕೋಲಾಪುರದಲ್ಲಿ ಚಿನ್ನ ಮತ್ತು 2 ಬೆಳ್ಳಿ ಪದಕ ಪಡೆದು ಆಯ್ಕೆಯಾಗಿದ್ದಾನೆ. ನಿಜಾಮುದ್ದೀನ್ ಫುಟ್‌ಬಾಲ್‌ನಲ್ಲಿ ತರಬೇತಿ ಪಡೆದು ರಾಜ್ಯತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿದ್ದಾನೆ ಎಂದರು.

ಸಂತ ಆಗ್ನೆಸ್ ವಿಶೇಷ ಶಾಲೆಯ ಪ್ರಾಂಶುಪಾಲರಾದ ಭಗಿನಿ ಮರಿಯಾ ಶ್ರುತಿ, ಪವರ್‌ಲಿಫ್ಟಿಂಗ್ ಕೋಚ್ ಪ್ರೇಮನಾಥ ಉಳ್ಳಾಲ, ಆಗ್ನೆಸ್ ಶಾಲೆ ಕ್ರೀಡಾ ಶಿಕ್ಷಕ ನಾರಾಯಣ ಶೇರಿಗಾರ್ ಉಪಸ್ಥಿತರಿದ್ದರು.

ಪ್ರಾಯೋಜಕತ್ವಕ್ಕೆ ಮನವಿ

ಮಂಗಳೂರಿನಿಂದ ವಿಶ್ವ ವಿಶೇಷ ಒಲಂಪಿಕ್ಸ್‌ಗೆ ಆಯ್ಕೆಯಾದ ಮಕ್ಕಳಿಗೆ ಮಂಗಳೂರಿನ ಕಾರ್ಪೋರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು ತಮ್ಮ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ನೆರವು ನೀಡಿ ಪ್ರಾಯೋಜಕತ್ವ ವಹಿಸಿಕೊಳ್ಳಬೇಕು ಎಂದು ಕ್ರೀಡಾ ಶಿಕ್ಷಕ ನಾರಾಯಣ ಶೇರಿಗಾರ್ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News