ಹಿಂದು ಧರ್ಮದ ಪುನರುಜ್ಜೀವನಕ್ಕೆ ಶಿವಾಜಿ ಕಾರಣ: ಲಾಲಾಜಿ ಮೆಂಡನ್

Update: 2019-02-19 13:18 GMT

ಉಡುಪಿ, ಫೆ.19: ಮೊಗಲರ ದಾಳಿಯಿಂದ ಅವನತಿಯ ಹಾದಿಯಲ್ಲಿದ್ದ ಹಿಂದೂ ಧರ್ಮವನ್ನು ರಕ್ಷಿಸಿದವರು ಛತ್ರಪತಿ ಶಿವಾಜಿ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದ್ದಾರೆ.

ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಹಾಗೂ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮೊಗಲರು ದಾಳಿ ಮಾಡಿದ ಸಂದರ್ಭದಲ್ಲಿ ಹಿಂದೂ ಧರ್ಮ ಅವನತಿಯ ಹಾದಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಲು ಶ್ರಮಿಸಿದ ವ್ಯಕ್ತಿ ಛತ್ರಪತಿ ಶಿವಾಜಿ. ಬಾಲ್ಯದಲ್ಲಿ ತನ್ನ ತಾಯಿ ಜೀಜಾಬಾಯಿಯಿಂದ ರಾಮಾಯಣ, ಮಹಾಭಾರತದ ಕಥೆಗಳನ್ನು ಕೇಳಿ ಪ್ರೇರಣೆ ಪಡೆದಿದ್ದು, ದೇಶದಲ್ಲಿ ಹಿಂದೂ ಧರ್ಮವನ್ನು ಉಳಿಸಿ, ಅದರ ಧ್ವಜವನ್ನು ಹಾರಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ ಎಂದು ಲಾಲಾಜಿ ಮೆಂಡನ್ ಹೇಳಿದರು.

ಛತ್ರಪತಿ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಿ, ಶಿವಾಜಿ ಸಮಾಜಕ್ಕಾಗಿ ಹೇಗೆ ಬದುಕಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಅಲ್ಲದೇ ದೇಶಕ್ಕಾಗಿ ಬದುಕಲು ಪ್ರೇರಣೆ ನೀಡಿದವರು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಿವಾಜಿಯ ಆದರ್ಶ, ಚಿಂತನೆಗಳು ಸದಾ ಮೂಡುತ್ತಿರಬೇಕು ಎಂದರು.

ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಹಿರಿಯಡಕ ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ತಾಪಂ ಸದಸ್ಯ ಲಕ್ಷ್ಮೀ ನಾರಾಯಣ್ ಪ್ರಭು, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಸವಿತಾ ನಾಯಕ್, ಜಿಲ್ಲಾ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸಿ ನಾಯ್ಕಾ, ಜಿಲ್ಲಾ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷ ಬಡಾನಿಡಿಯೂರು ಕೇಶವ ರಾವ್, ಪೆರ್ಡೂರು ತಾಪಂ ಸದಸ್ಯ ಸುಭಾಷ್ ನಾಯಕ್, ಸಂಧ್ಯಾ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News