ಅಸ್ಸಾಮಿನ ಸ್ಥಾನಬದ್ಧತೆ ಕೇಂದ್ರಗಳಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಸುಪ್ರೀಂ ಕಳವಳ

Update: 2019-02-19 17:01 GMT

ಹೊಸದಿಲ್ಲಿ,ಫೆ.19: ತಮ್ಮ ಮೂಲ ದೇಶಗಳಿಗೆ ವಾಪಸ್ ಅಥವಾ ಗಡಿಪಾರುಗೊಳ್ಳದೆ ಹಲವಾರು ವರ್ಷಗಳಿಂದಲೂ ಅಸ್ಸಾಮಿನ ಸ್ಥಾನಬದ್ಧತೆ ಕೇಂದ್ರಗಳಲ್ಲಿ ಕೊಳೆಯುತ್ತಿರುವ ಸಾವಿರಾರು ಅಕ್ರಮ ವಲಸಿಗರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕಳವಳವನ್ನು ವ್ಯಕ್ತಪಡಿಸಿತು.

ಈ ಜನರನ್ನು ಇಷ್ಟೊಂದು ದೀರ್ಘಾವಧಿಗೆ ಸ್ಥಾನಬದ್ಧತೆಯಲ್ಲಿ ಏಕಿರಿಸಲಾಗಿದೆ ಎನ್ನುವುದರ ಬಗ್ಗೆ ರಾಜ್ಯ ಸರಕಾರದಿಂದ ವಿವರಣೆ ಅಗತ್ಯವಾಗಿದೆ ಎಂದು ನಿಮಗನ್ನಿಸುವುದಿಲ್ಲವೇ?, ಅವರಲ್ಲಿ ಹೆಚ್ಚಿನವರು ಕಳೆದ 9-10 ವರ್ಷಗಳಿಂದಲೂ ಸ್ಥಾನಬದ್ಧತೆಯಲ್ಲಿದ್ದಾರೆ. ಇದಕ್ಕೆ ಸಮರ್ಥನೆ ಏನಿದೆ ಎಂದು ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ಅಸ್ಸಾಂ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾರನ್ನು ಪ್ರಶ್ನಿಸಿತು.

ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಲು ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯವಿದೆ ಮತ್ತು ಇದು ಶೀಘ್ರವೇ ಆಗಬೇಕಿದೆ ಎಂದು ಮೆಹ್ತಾ ವಿವರಿಸಿದರು.

ಸ್ಥಾನಬದ್ಧತೆ ಕೇಂದ್ರಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನೆತ್ತಿದ ಪೀಠವು,ಈ ಜನರನ್ನು ಅನಿರ್ದಿಷ್ಟಾವಧಿಗೆೆ ಸ್ಥಾನಬದ್ಧತೆಯಲ್ಲಿ ಇರಿಸುವಂತಿಲ್ಲ. ಈ ಎಲ್ಲ ವರ್ಷಗಳಲ್ಲಿ ಈ ಕೇಂದ್ರಗಳಲ್ಲಿ ಜೀವನ ಸ್ಥಿತಿ ತೃಪ್ತಿದಾಯಕವಾಗಿಲ್ಲ. ಅಲ್ಲಿ ದಯನೀಯ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿತು.

ಪೀಠವು ವ್ಯಕ್ತಪಡಿಸಿರುವ ಕಳವಳಗಳನ್ನು ಬಗೆಹರಿಸಲು ಎರಡು ವಾರಗಳ ಸಮಯಾವಕಾಶಕ್ಕಾಗಿ ಮೆಹ್ತಾ ಅವರ ಕೋರಿಕೆಯನ್ನು ಒಪ್ಪಿಕೊಂಡ ನ್ಯಾಯಾಲಯವು ವಿಚಾರಣೆಯನ್ನು ಮಾ.13ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News