ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆ

Update: 2019-02-19 17:04 GMT

ಹೊಸದಿಲ್ಲಿ,ಫೆ.19: ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ದಾಖಲಿಸಿರುವ ಎಲ್ಲ ಪ್ರಕರಣಗಳಲ್ಲಿ ಅವರ ಬಂಧನಕ್ಕೆ ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ.

ಪ.ಬಂಗಾಳ ಪೊಲೀಸರು ಹಫ್ತಾ ವಸೂಲಿ ಮತ್ತು ಚಿನ್ನಕ್ಕೆ ಬದಲಾಗಿ ನಿಷೇಧಿತ ನೋಟುಗಳ ವಿನಿಮಯ ಆರೋಪ ಸೇರಿದಂತೆ ಈವರೆಗೆ ತನ್ನ ವಿರುದ್ಧ 10 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಆಪ್ತರಾಗಿದ್ದ ಘೋಷ್ ಹೇಳಿದ್ದಾರೆ.

ಮುಂದಿನ ಆದೇಶಗಳವರೆಗೆ ಘೋಷ್ ಅವರನ್ನು ಬಂಧಿಸುವಂತಿಲ್ಲ ಎಂದು ನಿರ್ದೇಶ ನೀಡಿದ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ,ಎಸ್.ಅಬ್ದುಲ್ ನಝೀರ್ ಮತ್ತು ಎಂ.ಆರ್.ಶಾ ಅವರ ಪೀಠವು ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಘೋಷ್ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳಲ್ಲಿ ಬಂಧನಕ್ಕೆ ತಡೆಯಾಜ್ಞೆಯನ್ನು ನೀಡಿದೆ. ಹೊಸದಾಗಿ ದಾಖಲಾಗಿರುವ ಮೂರು ಪ್ರಕರಣಗಳಲ್ಲಿಯೂ ಬಂಧನಕ್ಕೆ ತಡೆಯಾಜ್ಞೆಯನ್ನು ನೀಡುವಂತೆ ಘೋಷ್ ಪರ ವಕೀಲ ಮಹೇಶ ಜೇಠ್ಮಲಾನಿ ಅವರು ನ್ಯಾಯಾಲಯವನ್ನು ಕೋರಿದ್ದರು.

ಇದನ್ನು ವಿರೋಧಿಸಿದ್ದ ಪ.ಬಂಗಾಳ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು,ಘೋಷ್ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿವೆ. ಅವರ ವಿರುದ್ಧ ತನಿಖೆಯು ಪ್ರಗತಿಯಲ್ಲಿದೆ ಮತ್ತು ಹೊಸ ಪ್ರಕರಣಗಳಲ್ಲಿ ಅವರ ಬಂಧನವನ್ನು ನ್ಯಾಯಾಲಯವು ತಡೆಯಬಾರದು ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News