ಪುಲ್ವಾಮ ದಾಳಿಗೆ ಭಟ್ಕಳದಲ್ಲಿ ಸಂಭ್ರಮಾಚರಣೆ ನಡೆಯಿತೇ?: ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಸತ್ಯಾಸತ್ಯತೆ

Update: 2019-02-19 17:56 GMT

ಭಟ್ಕಳ, ಫೆ.19: ಪುಲ್ವಾಮದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದು, ಇಡೀ ದೇಶವೇ ಯೋಧರಿಗಾಗಿ ಮರುಗಿದೆ. ಈ ನಡುವೆ ಯೋಧರ ಸಾವಿನಲ್ಲೂ ರಾಜಕೀಯ ಮಾಡುವ, ದ್ವೇಷ ಹರಡುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಈ ಕೃತ್ಯಕ್ಕೆ ವೇದಿಕೆಯಾಗಿ ಕಿಡಿಗೇಡಿಗಳು ಬಳಸುತ್ತಿದ್ದಾರೆ.

ಫೇಸ್ಬುಕ್, ವಾಟ್ಸ್ಯಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರ ತಲೆಬರಹ ಈ ರೀತಿ ಇದೆ. “ಸಿಆರ್ ಪಿಎಫ್ ಯೋಧರ ಸಾವಿಗೆ ಸಂಭ್ರಮಿಸುತ್ತಿರುವ ಭಟ್ಕಳದ ಮುಸ್ಲಿಮರು”…..

ಜನರ ಗುಂಪೊಂದು ಕೇಕೆ ಹಾಕುತ್ತಾ, ಬೊಬ್ಬಿಡುತ್ತಾ ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವ ವಿಡಿಯೋ ಇದಾಗಿದೆ. ಗುಂಪಿನಲ್ಲಿದ್ದವರು ಸಂಭ್ರಮಾಚರಣೆಯಲ್ಲಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಫೆ.15ರಂದು ಶೂಟ್ ಮಾಡಲಾದ ವಿಡಿಯೋ ಇದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಾತ್ರ ಸುಳ್ಳು ತಲೆಬರಹದೊಂದಿಗೆ.

ವಾಸ್ತವವೇನು?

'ಪುಲ್ವಾಮಾ ದಾಳಿಗೆ ಸಂಭ್ರಮಿಸುತ್ತಿರುವ ಭಟ್ಕಳಿಗರು' ಎನ್ನುವ ತಲೆಬರಹದ ಈ ವಿಡಿಯೋ ವಾಸ್ತವವಾಗಿ ಕ್ರಿಕೆಟ್ ಟೂರ್ನಮೆಂಟ್ ಗೆದ್ದ ತಂಡವೊಂದರ ಸಂಭ್ರಮಾಚರಣೆಯದ್ದು ಎನ್ನುವುದು ‘ವಾರ್ತಾ ಭಾರತಿ’ ನಡೆಸಿದ ರಿಯಾಲಿಟಿ ಚೆಕ್ ನಿಂದ ತಿಳಿದುಬಂದಿದೆ. ‘ವಾರ್ತಾ ಭಾರತಿ’ಯು ಭಟ್ಕಳ್ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದೆ. “ಇದು ಯಾವುದೇ ಸಮಾಜ ವಿರೋಧಿ, ದೇಶವಿರೋಧಿ ರ್ಯಾಲಿಯಲ್ಲ. ಫೆಬ್ರವರಿ 15ರಂದು ಮನ್ಕಿಯಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ಒಂದರ ವಿಜಯಿ ತಂಡದ ಸಂಭ್ರಮಾಚರಣೆಯಿದು” ಎಂದವರು ಸ್ಪಷ್ಟಪಡಿಸಿದ್ದಾರೆ.

“ಮನ್ಕಿಯಿಂದ ಭಟ್ಕಳದವರೆಗೆ ಆಟಗಾರರು ಯಾವುದೇ ಸಂಭ್ರಮಾಚರಣೆಯಿಲ್ಲದೆ ಶಾಂತಿಯಿಂದ ಮೆರವಣಿಗೆ ನಡೆಸಿದ್ದರು. ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸದಂತೆ ನಾವು ಮಾಹಿತಿ ನೀಡಿದ್ದೆವು. ಅವರು ತಮ್ಮ ಊರನ್ನು ತಲುಪಿದಾಗ ಸಂಭ್ರಮಾಚರಣೆ ನಡೆಸಿದ್ದರು. ಕ್ರೀಡಾ ಟೂರ್ನಮೆಂಟ್ ಗಳ ನಂತರ ಇಂತಹ ಸಂಭ್ರಮಾಚರಣೆಗಳು ಭಟ್ಕಳದಲ್ಲಿ ಸಾಮಾನ್ಯವಾಗಿ ನಡೆಯುತ್ತದೆ” ಎಂದವರು ಹೇಳುತ್ತಾರೆ.

“ಇಲ್ಲಿನ ವಿಡಿಯೋ ಶೂಟ್ ಮಾಡಿ ಕೆಲವು ದುಷ್ಕರ್ಮಿಗಳು ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ಎಂದು ಸುಳ್ಳನ್ನು ಹರಡಿದ್ದಾರೆ. ಕೆಲವರು ಕ್ಲಬ್ ವಿರುದ್ಧವೂ ದೂರು ನೀಡಿದ್ದಾರೆ. ಈ ಬಗ್ಗೆ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಿದ್ದಾರೆಯೇ ಹೊರತು ದೇಶವಿರೋಧಿ ಚಟುವಟಿಕೆಯ ಬಗ್ಗೆಯಲ್ಲ. ಆದರೆ ವಿಡಿಯೋಗೆ ಬೇರೆಯದೇ ಆದ ತಲೆಬರಹ ನೀಡಿ ಸುಳ್ಳನ್ನು ಹರಡಲಾಗುತ್ತಿದೆ” ಎಂದವರು ಹೇಳಿದರು.

ಈ ಬಗ್ಗೆ ‘ವಾರ್ತಾ ಭಾರತಿ’ಯು ಭಟ್ಕಳ ಸರ್ಕಲ್ ಇನ್ ಸ್ಪೆಕ್ಟರ್ ಕೆ.ಎಲ್. ಗಣೇಶ್ ರನ್ನು ಸಂಪರ್ಕಿಸಿದ್ದು, ಪುಲ್ವಾಮ ಘಟನೆಯ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ಎನ್ನುವ ಸುದ್ದಿಗಳನ್ನು ಅವರು ಅಲ್ಲಗಳೆದಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತಂದ ಕಾರಣ್ಕಕಾಗಿ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಮಗೆ ಯಾವುದೇ ದೇಶ ವಿರೋಧಿ, ಸಮಾಜ ವಿರೋಧಿ ಕೃತ್ಯಗಳು ಕಂಡುಬಂದಿಲ್ಲ ಹಾಗೂ ಈ ಬಗ್ಗೆ ದೂರು ಬಂದಿಲ್ಲ ಎಂದವರು ಹೇಳಿದರು.

“ಈ ಎಲ್ಲಾ ವದಂತಿಗಳು ಸುಳ್ಳು. ಈ ಪ್ರದೇಶದಲ್ಲಿ ಸೌಹಾರ್ದ ಮತ್ತು ಶಾಂತಿಯನ್ನು ಕದಡಲು ಮಾಡಿದ ಪ್ರಯತ್ನಗಳಿವು.. ಇಂತಹ ವದಂತಿಗಳನ್ನು ನಂಬಬಾರದು” ಎಂದವರು ಹೇಳಿದರು.

ಸುಮಾರು 44 ಸೈನಿಕರು ಹುತಾತ್ಮರಾದ ಮರುದಿನ ಅಂದರೆ ಫೆಬ್ರವರಿ 15ರಂದು ಅಂತಹ ಸಂಭ್ರಮಾಚರಣೆ ಮಾಡಿರುವುದು ಸರಿಯಲ್ಲ. ಆದರೂ ಯಾವುದೋ ವಿಡಿಯೋಗೆ ಇನ್ಯಾವುದೋ ದ್ವೇಷ ಬಿತ್ತುವ ತಲೆಬರಹ ನೀಡಿ, ಯೋಧರ ಸಾವಿನಲ್ಲೂ ದ್ವೇಷದ ಬೆಂಕಿ ಹಚ್ಚುವ ಕಿಡಿಗೇಡಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News