ಬಾಕ್ಸಿಂಗ್: ಚಿನ್ನಕ್ಕೆ ಕೊರಳೊಡ್ಡಿದ ಝರೀನ, ಮೀನಾಕುಮಾರಿ

Update: 2019-02-19 17:53 GMT

ಸೋಫಿಯ(ಬಲ್ಗೇರಿಯ), ಫೆ.19: ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಝರೀನ ಹಾಗೂ ಮೀನಾಕುಮಾರಿ ಮಂಗಳವಾರ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬಾಕ್ಸರ್‌ಗಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಹಲವು ಬಾರಿ ರಾಷ್ಟ್ರೀಯ ಪದಕ ಗೆದ್ದಿರುವ ಝರೀನ 51 ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ನ ಐರಿಷ್ ಮ್ಯಾಗ್ನೊ ವಿರುದ್ಧ 5-0 ಅಂಕಗಳ ಅಂತರದ ಜಯ ಸಾಧಿಸಿದರು. ಫೈನಲ್ ಪಂದ್ಯದುದ್ದಕ್ಕೂ ಪಾರಮ್ಯ ಮೆರೆದ ಝರೀನ ಅಂತಿಮ ಪಂದ್ಯದಲ್ಲಿ ಪ್ರಬಲ ರಕ್ಷಣಾತ್ಮಕ ಆಟದಿಂದ ಗಮನ ಸೆಳೆದರು. ಕೊನೆಯವರೆಗೂ ನಿಕಟ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಎದುರಾಳಿಗೆ ಒಂದೂ ಅಂಕ ಬಿಟ್ಟುಕೊಡದೇ ಗೆಲುವಿನ ನಗೆ ಬೀರಿದರು.

ಮತ್ತೊಂದೆಡೆ ಮೀನಾಕುಮಾರಿ ದೇವಿ 54 ಕೆ.ಜಿ. ಬಾಟಮ್‌ವೇಟ್ ವಿಭಾಗದಲ್ಲಿ ಫಿಲಿಪ್ಪೀನ್ಸ್‌ನವರೇ ಆದ ಐರಾ ವಿಲ್ಲೇಗಾಸ್ ಅವರನ್ನು 3-2 ಅಂಕಗಳ ಅಂತರದಿಂದ ಮಣಿಸಿ ಸಂಭ್ರಮಿಸಿದರು. ಪ್ರತಿಷ್ಠಿತ ಟೂರ್ನಿಯ ಕಳೆದ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ತೃಪ್ತರಾಗಿದ್ದ ದೇವಿ, ಎದುರಾಳಿ ವಿಲ್ಲೆಗಾಸ್ ವಿರುದ್ಧ ದಿಟ್ಟ ಆಟದ ಮೂಲಕ ತನ್ನ ಪ್ರದರ್ಶನ ಉತ್ತಮಪಡಿಸಿಕೊಂಡರು.

ಆಕ್ರಮಣಕಾರಿ ಎದುರಾಳಿ ಎದುರು ಪ್ರತಿದಾಳಿಯ ಮೂಲಕ ಗಮನ ಸೆಳೆದ ದೇವಿ, ಅಂತಿಮವಾಗಿ ಚಿನ್ನದ ಗರಿ ಮುಡಿಗೇರಿಸಿಕೊಂಡರು.

ಆದಾಗ್ಯೂ 48 ಕೆ.ಜಿ. ವಿಭಾಗದಲ್ಲಿ ಮಂಜುರಾಣಿ ಫಿಲಿಪ್ಪೀನ್ಸ್‌ನ ಜೋಸಿ ಗಾಬುಕೊ ವಿರುದ್ಧ 2-3 ಅಂತರದಿಂದ ಮಣಿದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

►ಕಂಚಿನ ಪದಕಕ್ಕೆ ತೃಪ್ತಿಪಟ್ಟ ಮೂವರು

ಸೊೀಮವಾರ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಪ್ವಿಲೊ ಬಾಸುಮತಾರಿ(64 ಕೆ.ಜಿ.), ನೀರಜ್(60 ಕೆ.ಜಿ.) ಹಾಗೂ ಲವ್ಲಿನಾ ಬೊರ್ಗೊಹೈನ್(69 ಕೆ.ಜಿ.) ಕಂಚಿನ ಪದಕಗಳಿಗೆ ತೃಪ್ತಿಪಟ್ಟರು.  2018ರ ಆವೃತ್ತಿಯಲ್ಲಿ ಭಾರತ ಒಟ್ಟು 11 ಪದಕಗಳನ್ನು ಗೆದ್ದಿದ್ದು ಅದರಲ್ಲಿ ಎರಡು ಬಂಗಾರದ ಪದಕಗಳಿದ್ದವು. ಅದು ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News