ಮೊದಲೆರಡು ವಾರಗಳ ಐಪಿಎಲ್ ಟಿ20 ಟೂರ್ನಿ ವೇಳಾಪಟ್ಟಿ ಪ್ರಕಟ

Update: 2019-02-19 17:56 GMT

ಹೊಸದಿಲ್ಲಿ, ಫೆ.19: ಹನ್ನೊಂದನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲೆರಡು ವಾರಗಳ(17 ಪಂದ್ಯಗಳು)ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಆದರೆ, ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕೊನೆ ಕ್ಷಣದ ಬದಲಾವಣೆಯಾಗುವ ಸಾಧ್ಯತೆಯಿದೆ. ಮಂಗಳವಾರ ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನಲ್ಲಿ ಆಡಲಿರುವ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

2019ರ ಲೋಕಸಭಾ ಚುನಾವಣೆಗೆ ಇನ್ನಷ್ಟೇ ದಿನಾಂಕ ಘೋಷಣೆಯಾಗಬೇಕಾಗಿದೆ. ಚುನಾವಣಾ ವೇಳಾಪಟ್ಟಿ ಬಿಡುಗಡೆಯಾದ ಬಳಿಕ ಬಿಸಿಸಿಐ ಮೊದಲೆರಡು ವಾರಗಳ ಐಪಿಎಲ್‌ಗೆ ಸಂಬಂಧಿಸಿದ ವಿಷಯದ ಬಗ್ಗೆ ಗಮನ ಹರಿಸಲಿದೆ. ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ತಯಾರಿಸಲಿದೆ. 2 ವಾರಗಳ ಕಾಲ ಒಟ್ಟು 17 ಪಂದ್ಯಗಳು 8 ತಾಣಗಳಲ್ಲಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ 5 ಪಂದ್ಯಗಳನ್ನು ಆಡಿದರೆ, ಉಳಿದ ತಂಡಗಳು ಕನಿಷ್ಠ 4 ಪಂದ್ಯಗಳನ್ನು ಆಡಲಿವೆ. ಪ್ರತಿ ತಂಡ ತವರಿನ ಸ್ಟೇಡಿಯಂನಲ್ಲಿ 2 ಹಾಗೂ ಹೊರಗೆ 2 ಪಂದ್ಯವನ್ನು ಆಡಲಿದೆ. ಡೆಲ್ಲಿ ತವರಿನಲ್ಲಿ 3 ಹಾಗೂ ಆರ್‌ಸಿಬಿ ತವರಿನಿಂದ ಹೊರಗೆ 3 ಪಂದ್ಯಗಳನ್ನು ಆಡುತ್ತವೆ.

ಈ ಹಿಂದೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ಬಾರಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲಾಗಿತ್ತು. 2009ರಲ್ಲಿ ದಕ್ಷಿಣ ಆಫ್ರಿಕ ಹಾಗೂ 2014ರಲ್ಲಿ ಯುಎಇ(ಭಾಗಶಃ ಟೂರ್ನಿ)ಯಲ್ಲಿ ಆಡಲಾಗಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿ ವಿಶ್ವಕಪ್ ದಿನಾಂಕದೊಂದಿಗೆ ಪೈಪೋಟಿ ಎದುರಿಸುತ್ತಿದೆ. ವಿಶ್ವಕಪ್ ಟೂರ್ನಿಯು ಇಂಗ್ಲೆಂಡ್ ನೆಲದಲ್ಲಿ ಮೇ 30 ರಿಂದ ಜುಲೈ 14ರ ತನಕ ನಡೆಯಲಿದೆ. ಸಾಮಾನ್ಯವಾಗಿ ಐಪಿಎಲ್ ಟೂರ್ನಿಯು ಎಪ್ರಿಲ್ ಮೊದಲ ವಾರ ಆರಂಭವಾಗಿ, ಮೇ ಕೊನೆಯ ವಾರದಲ್ಲಿ ಕೊನೆಗೊಳ್ಳುತ್ತದೆ.ಆದರೆ ಈ ಬಾರಿ ಅದು ಸಾಧ್ಯವಿಲ್ಲ. ಜಸ್ಟಿಸ್ ಲೋಧ ಸಮಿತಿಯ ಶಿಫಾರಸಿನ ಅನ್ವಯ ಐಪಿಎಲ್ ಹಾಗೂ ಅಂತರ್‌ರಾಷ್ಟ್ರೀಯ ಟೂರ್ನಿಗಳ ಮಧ್ಯೆ ಕಡ್ಡಾಯವಾಗಿ 15 ದಿನಗಳ ಅಂತರವಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News