ಸ್ಕಾಟ್ಲೆಂಡ್ ವಿರುದ್ಧ ಓಮಾನ್ 24 ರನ್‌ಗೆ ಸರ್ವಪತನ!

Update: 2019-02-19 18:01 GMT

ಮಸ್ಕತ್(ಓಮಾನ್), ಫೆ.19: ಸ್ಕಾಟ್ಲೆಂಡ್ ಹಾಗೂ ಓಮಾನ್ ತಂಡಗಳ ಮಧ್ಯೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಂಗಳವಾರ ಓಮಾನ್ ಕೇವಲ 24 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿದೆ. ಆ ಮೂಲಕ ಲಿಸ್ಟ್ -ಎ ಕ್ರಿಕೆಟ್‌ನಲ್ಲಿ 4ನೇ ಕನಿಷ್ಠ ಸ್ಕೋರ್ ಗಳಿಸಿ ಕಳಪೆ ದಾಖಲೆಗೆ ಪಾತ್ರವಾಗಿದೆ.

25 ರನ್‌ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ, ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಗೆಲುವು ದಾಖಲಿಸಿತು. ಇನ್ನೂ 280 ಎಸೆತಗಳು ಬಾಕಿ ಉಳಿದವು. ಆದರೆ ಓಮಾನ್ ಆಡಿದ್ದು ಕೇವಲ 17 ಓವರ್‌ಗಳು.

ಸ್ಕಾಟ್ಲೆಂಡ್ ತಂಡದ ಆ್ಯಡ್ರಿಯಾನ್ ನೀಲ್ ಹಾಗೂ ರೂಐಧ್ರಿ ಸ್ಮಿತ್ ಇಬ್ಬರೂ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಒಟ್ಟು 20.3 ಓವರ್‌ಗಳಲ್ಲಿ ಪಂದ್ಯ ಕೊನೆಗೊಂಡಿತು. ಓಮಾನ್ ತಂಡದ 6 ಮಂದಿ ದಾಂಡಿಗರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಎದುರಾಳಿ ತಂಡದ ಬೌಲಿಂಗ್ ದಾಳಿಯ ಪ್ರಖರತೆಯನ್ನು ಸೂಚಿಸುತ್ತಿತ್ತು. ಮೂರನೇ ಆಟಗಾರನಾಗಿ ಕಣಕ್ಕಿಳಿದ ಖವರ್ ಅಲಿ ಗಳಿಸಿದ 15 ರನ್‌ಗಳೇ ಓಮಾನ್ ಪರ ಅತ್ಯಧಿಕ ಸ್ಕೋರ್.

ಕೈಲ್ ಕೊಯಿಟ್ಝರ್ ಹಾಗೂ ಮ್ಯಾಥ್ಯು ಕ್ರಾಸ್ ಸೇರಿ ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ಸ್ಕಾಟ್ಲಂಡ್‌ಗೆ ಸುಲಭ ಗೆಲುವು ತಂದುಕೊಟ್ಟರು. ಉಭಯ ತಂಡಗಳು ಎರಡನೇ ಪಂದ್ಯಕ್ಕಾಗಿ ಬುಧವಾರ ಮುಖಾಮುಖಿಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News