ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ವರದಿ: ಉತ್ತರಾಖಂಡಕ್ಕೆ ಪಿಡಿಪಿ ನಿಯೋಗದ ಭೇಟಿ

Update: 2019-02-20 15:52 GMT

ಡೆಹ್ರಾಡೂನ್,ಫೆ.20: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವರದಿಗಳ ಹಿನ್ನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲು ಜಮ್ಮು-ಕಾಶ್ಮೀರದ ಪಿಡಿಪಿ ನಿಯೋಗವೊಂದು ಮಂಗಳವಾರ ಉತ್ತರಾಖಂಡಕ್ಕೆ ಭೇಟಿ ನೀಡಿತ್ತು.

ರಾಜ್ಯಸಭಾ ಸದಸ್ಯ ಫಯಾಝ್ ಅಹ್ಮದ್ ಮೀರ್, ಮಾಜಿ ಶಾಸಕ ಇಜಾಝ್ ಅಹ್ಮದ್ ಮೀರ್ ಮತ್ತು ಇತರ ಪಿಡಿಪಿ ನಾಯಕರನ್ನೊಳಗೊಂಡಿದ್ದ ನಿಯೋಗವು ಡೆಹ್ರಾಡೂನ್‌ಗೆ ಆಗಮಿಸಿ ಇಲ್ಲಿಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದ್ದು, ಅವರ ಸುರಕ್ಷತೆಯ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿ ಮರಳಿದೆ ಎಂದು ಐಜಿಪಿ ಅಜಯ್ ರೌತೇಲಾ ಅವರು ತಿಳಿಸಿದರು. ಕಾಶ್ಮೀರಕ್ಕೆ ವಾಪಸಾಗಲು ಬಯಸಿದ್ದ ಕೆಲವು ವಿದ್ಯಾರ್ಥಿಗಳು ನಿಯೋಗದೊಂದಿಗೆ ತೆರಳಿದ್ದಾರೆ ಎಂದರು.

ಪುಲ್ವಾಮಾ ದಾಳಿಯ ಬಳಿಕ ಕಳೆದ ವಾರಾಂತ್ಯದಲ್ಲಿ ನಗರದಲ್ಲಿ ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗಿದೆ ಮತ್ತು ಅವರನ್ನು ಥಳಿಸಲಾಗಿದೆ ಎಂದು ಹೇಳಲಾಗಿದೆ. ಉತ್ತರಾಖಂಡದಲ್ಲಿಯ ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳು ತಾತ್ಕಾಲಿವಾಗಿ ರಾಜ್ಯವನ್ನು ತೊರೆದಿದ್ದಾರೆ. ಸುಮಾರು 300ರಷ್ಟು ಕಾಶ್ಮೀರಿ ವಿದ್ಯಾರ್ಥಿಗಳು ಜಮ್ಮು ಮತ್ತು ದಿಲ್ಲಿಗೆ ತೆರಳಿದ್ದಾರೆ.

ಮಂಗಳವಾರ ಪ್ರತಿಭಟನೆ ನಡೆಸಿ ಡೆಹ್ರಾಡೂನ್‌ನಿಂದ ಕಾಶ್ಮೀರಿ ವಿದ್ಯಾರ್ಥಿಗಳನ್ನು ಹೊರದಬ್ಬಬೇಕೆಂದು ಆಗ್ರಹಿಸಿದ್ದ 22 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತನ್ಮಧ್ಯೆ ರಾಜ್ಯದಲ್ಲಿಯ ಕಾಲೇಜುಗಳು ಅಥವಾ ವಿವಿಗಳಲ್ಲಿ ಪ್ರವೇಶ ಕೋರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗಾಗಿ ನೂತನ ನಿಯಮಗಳನ್ನು ಜಾರಿಗೊಳಿಸುವುದಾಗಿ ಉತ್ತರಾಖಂಡ ಸರಕಾರವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News