ಅಯೋಧ್ಯೆ ಪ್ರಕರಣ: ಫೆ.26ರಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠದಿಂದ ವಿಚಾರಣೆ

Update: 2019-02-20 15:53 GMT

ಹೊಸದಿಲ್ಲಿ,ಫೆ.20: ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಫೆ.26ರಂದು ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ತಿಳಿಸಿದೆ. ಜ.29ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಪೀಠದ ನ್ಯಾಯಾಧೀಶರಲ್ಲೊಬ್ಬರಾಗಿರುವ ನ್ಯಾ.ಎಸ್.ಎ.ಬೋಬಡೆ ಅವರ ಅಲಭ್ಯತೆಯಿಂದಾಗಿ ಮುಂದೂಡಲಾಗಿತ್ತು.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ವಿಚಾರಣೆಯನ್ನು ನಡೆಸಲಿದ್ದ ಪೀಠವನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ಜನವರಿಯಲ್ಲಿ ಪುನರ್‌ರಚಿಸಿತ್ತು. ನ್ಯಾ.ಯು.ಯು.ಲಲಿತ್ ಅವರು ವಿಷಯದಿಂದ ಹಿಂದೆ ಸರಿದ ಬಳಿಕ ಜ.10ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲಾಗಿತ್ತು.

ನೂತನ ಪೀಠವು ತನ್ನನ್ನು ಮತ್ತು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್, ಎಸ್.ಅಬ್ದುಲ್ ನಝೀರ್, ಎಸ್.ಎ.ಬೋಬಡೆ ಮತ್ತು ಡಿ.ವಿ.ಚಂದ್ರಚೂಡ ಅವರನ್ನೊಳಗೊಂಡಿದೆ ಎಂದು ಮು.ನ್ಯಾ.ರಂಜನ್ ಗೊಗೊಯಿ ತಿಳಿಸಿದರು. ಹಿಂದಿನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಗೊಗೊಯಿ, ಬೋಬಡೆ, ಚಂದ್ರಚೂಡ, ಎನ್.ವಿ.ರಮಣ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡಿತ್ತು.

ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರು ಭಾಗಗಳಾಗಿ ಹಂಚಿಕೆ ಮಾಡಿರುವ 2010ರ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ 14 ಪ್ರತ್ಯೇಕ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News