ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳ ಮೇಲೆ ಒತ್ತಡ ಹೆಚ್ಚಳ: ಪ್ರಧಾನಿ ಮೋದಿ ಮತ್ತು ಸೌದಿ ಯುವರಾಜರ ಸಹಮತ

Update: 2019-02-20 15:58 GMT

ಹೊಸದಿಲ್ಲಿ,ಫೆ.20: ಭೀತಿವಾದಕ್ಕೆ ಕುಮ್ಮಕ್ಕು ನಿಡುವ ರಾಷ್ಟ್ರಗಳ ಮೇಲೆ ಸಾಧ್ಯವಿರುವ ಎಲ್ಲ ರೀತಿಗಳಲ್ಲಿ ಒತ್ತಡ ಹೇರಬೇಕು ಎನ್ನುವುದನ್ನು ತಾನು ಮತ್ತು ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಒಪ್ಪಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ ತಿಳಿಸಿದರು.

ಕಳೆದ ವಾರ ಪುಲ್ವಾಮಾದಲ್ಲಿ ನಡೆಸಿರುವ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

 ಕಳೆದ ವಾರ ಪುಲ್ವಾಮಾದಲ್ಲಿ ನಡೆದ ದಾಳಿಯು ಭೀತಿವಾದದ ಪಿಡುಗನ್ನು ಕ್ರೂರವಾಗಿ ನೆನಪಿಸಿದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಯಾವುದೇ ರೀತಿಯಲ್ಲಿ ಭಯೋತ್ಪಾದನೆಗೆ ನೆರವಾಗುವ ರಾಷ್ಟ್ರಗಳ ಮೇಲೆ ಸಾಧ್ಯವಿರುವ ಎಲ್ಲ ರೀತಿಗಳಲ್ಲಿ ಒತ್ತಡವನ್ನು ಹೆಚ್ಚಿಸುವ ಅಗತ್ಯವಿದೆ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ. ಭಯೋತ್ಪಾದನೆಯ ಮೂಲಸೌಕರ್ಯ ಮತ್ತು ಅದಕ್ಕೆ ಬೆಂಬಲವನ್ನು ನಿರ್ಮೂಲನಗೊಳಿಸುವುದು ಮತ್ತು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಶಿಕ್ಷೆಯಾಗುವಂತೆ ಮಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಹೇಳಿದರು.

ಹಿಂಸೆ ಮತ್ತು ಭಯೋತ್ಪಾದನೆ ನಮ್ಮ ಯುವಜನರನ್ನು ದಾರಿ ತಪ್ಪಿಸದಂತೆ ಉಗ್ರವಾದವನ್ನು ಹತ್ತಿಕ್ಕಲು ಕ್ರಿಯಾ ಯೋಜನೆಯೊಂದು ನಮಗೆ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಉಗ್ರವಾದ ಮತ್ತು ಭೀತಿವಾದ ಉಭಯ ರಾಷ್ಟ್ರಗಳ ಸಮಾನ ಕಳವಳಗಳಾಗಿವೆ ಎಂದು ಹೇಳಿದ ಸಲ್ಮಾನ್,ಎಲ್ಲ ಕ್ಷೇತ್ರಗಳಲ್ಲಿಯೂ ಭಾರತಕ್ಕೆ ಸಹಕಾರದ ಭರವಸೆಯನ್ನು ನೀಡಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ ಮೋದಿ,ನಮ್ಮ ಶಕ್ತಿ ಸಂಬಂಧವನ್ನು ವ್ಯೂಹಾತ್ಮಕ ಪಾಲುದಾರಿಕೆಯನ್ನಾಗಿ ಪರಿವರ್ತಿಸಲು ಇದು ಸಕಾಲವಾಗಿದೆ ಎಂದರು.

ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದ ಸಲ್ಮಾನ್ ಉಭಯ ರಾಷ್ಟ್ರಗಳ ನಡುವಿನ ವ್ಯೂಹಾತ್ಮಕ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಿದರು.

ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಸಲ್ಮಾನ್ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. ಈ ಸಂದರ್ಭ ಅವರು ಉಭಯ ರಾಷ್ಟ್ರಗಳ ನಡುವಿನ ಶತಮಾನಗಳಷ್ಟು ಹಳೆಯ ಬಾಂಧವ್ಯದ ಕುರಿತು ಮಾತನಾಡಿದರು.

ಮಂಗಳವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದ ಸಲ್ಮಾನ್‌ರನ್ನು ಮೋದಿ ಎಲ್ಲ ಶಿಷ್ಟಾಚಾರಗಳನ್ನು ಮುರಿದು ಸ್ವತಃ ವಿಮಾನ ನಿಲ್ದಾಣದಲ್ಲಿ ಹಾಜರಿದ್ದು ಸ್ವಾಗತಿಸಿದ್ದರು.

ಯುವರಾಜ ಸಲ್ಮಾನ್ ಬುಧವಾರ ರಾತ್ರಿ ಚೀನಾಕ್ಕೆ ಪ್ರಯಾಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News