‘ರಹಸ್ಯ ಹತ್ಯೆ’ ಮುಂದುವರಿಸಲು ಎನ್‌ಡಿಎಯಿಂದ ಒತ್ತಡ: ಅಸ್ಸಾಂ ಮಾಜಿ ಸಿಎಂ ಗೊಗೊಯಿ ಗಂಭೀರ ಆರೋಪ

Update: 2019-02-20 16:56 GMT

ಗುವಾಹಟಿ,ಫೆ.20: ಉಲ್ಫಾ ಉಗ್ರರ ರಹಸ್ಯ ಹತ್ಯೆ ನಡೆಸುವಂತೆ ಕೇಂದ್ರದಲ್ಲಿದ್ದ ಹಿಂದಿನ ಎನ್‌ಡಿಎ ಸರಕಾರ ತನ್ನ ಮೇಲೆ ಒತ್ತಡ ಹಾಕಿತ್ತು ಎಂದು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಆರೋಪಿಸಿದ್ದಾರೆ.

1990ರ ಕೊನೆಯಲ್ಲಿ ಅಸ್ಸಾಂನಲ್ಲಿ ಸರಕಾರಿ ಪ್ರಾಯೋಜಿತರು ಎನ್ನಲಾದ ಮುಸುಕುಧಾರಿಗಳು ಶಂಕಿತ ಉಲ್ಫಾ ಉಗ್ರರು ಮತ್ತು ಅವರ ಸಂಬಂಧಿಕರನ್ನು ಹತ್ಯೆ ಮಾಡಿದ ಅನೇಕ ಘಟನೆಗಳು ನಡೆದಿದ್ದವು. ಇದನ್ನು ರಹಸ್ಯ ಹತ್ಯೆಗಳು ಅಥವಾ ಕಾನೂನೇತರ ಹತ್ಯೆಗಳು ಎಂದು ಕರೆಯಲಾಗಿದೆ.

2001ರಿಂದ 2016ರ ವರೆಗೆ ಹದಿನೈದು ವರ್ಷಗಳ ಕಾಲ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಗೊಗೊಯಿ ಹೇಳುವಂತೆ, ಪಂಜಾಬ್‌ನ ಪೊಲೀಸ್‌ನ ಮಾಜಿ ಮುಖ್ಯಸ್ಥ ಕೆ.ಪಿ.ಎಸ್ ಗಿಲ್ ಅವರನ್ನು ಅಸ್ಸಾಂಗೆ ರಾಜ್ಯಪಾಲರಾಗಿ ಕಳುಹಿಸಲು ಅಂದು ಕೇಂದ್ರ ಗೃಹ ಸಚಿವರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಬಯಸಿದ್ದರು. ಅಸ್ಸಾಂನಲ್ಲಿ ರಹಸ್ಯ ಹತ್ಯೆಗಳು ಮುಂದುವರಿಯಲು ಬಯಸಿದ್ದ ಬಿಜೆಪಿ ಅದಕ್ಕಾಗಿ ಗೊಗೊಯಿ ಮೇಲೆ ಒತ್ತಡ ಹೇರುತ್ತ್ತಿತ್ತು. ರಾಜ್ಯಪಾಲರಾಗಿ ಗಿಲ್ ನೇಮಕಕ್ಕೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿದ ಕಾರಣ ಸರಕಾರ ತನ್ನ ಆದೇಶ ಹಿಂಪಡೆದಿತ್ತು ಎಂದು ಗೊಗೊಯಿ ತಿಳಿಸಿದ್ದಾರೆ.

ಈ ರಹಸ್ಯ ಹತ್ಯೆಗಳು ಬಿಜೆಪಿಯ ಪ್ರಫುಲ್ಲ ಕುಮಾರ್ ಮಹಾಂತ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದಿತ್ತು. ಈ ವೇಳೆ ಕೇಂದ್ರದಲ್ಲಿ ಬಿಜೆಪಿ ಸರಕಾರವಿತ್ತು ಎಂದು ಗೊಗೊಯಿ ಆರೋಪಿಸಿದ್ದಾರೆ. ಈ ಆರೋಪ ಆಧಾರರಹಿತ ಎಂದು ತಿಳಿಸಿರುವ ಅಸ್ಸಾಂ ಬಿಜೆಪಿ ಗೊಗೊಯಿ ಸದ್ಯ ವಿಭಜನೆಯ ರಾಜಕೀಯ ಮಾಡುತ್ತಿದ್ದಾರೆ. ಅವರು ಅಷ್ಟೊಂದು ಪ್ರಾಮಾಣಿಕರಾಗಿದ್ದರೆ ಅಧಿಕಾರದ ಅವಧಿಯಲ್ಲೇ ಈ ಹತ್ಯೆಗಳ ಬಗ್ಗೆ ತನಿಖೆಗೆ ಯಾಕೆ ಆದೇಶಿಸಲಿಲ್ಲ? ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News