ಮಂಗಳೂರು-ಬೆಂಗಳೂರು ಹೊಸ ರೈಲು ಸಂಚಾರಕ್ಕೆ ಚಾಲನೆ

Update: 2019-02-21 07:24 GMT

ಮಂಗಳೂರು, ಫೆ.21: ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಗುರುವಾರ ಚಾಲನೆ ನೀಡಲಾಯಿತು.

ನೈಋತ್ಯ ರೈಲ್ವೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದ್ದು, ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಇಂದು ಹಸಿರು ನಿಶಾನೆ ತೋರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ ನಂತರದ ದಿನಗಳಲ್ಲಿ ಆಮೆ ನಡಿಗೆಯಲ್ಲಿದ್ದ ರೈಲ್ವೆ ಅಭಿವೃದ್ಧಿ ಕಳೆದ ಐದು ವರ್ಷಗಳಲ್ಲಿ ಕುದುರೆ ವೇಗ ಪಡೆದಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ದ.ಕ. ಜಿಲ್ಲೆಗೆ 1,500 ಕೋಟಿ ರೂ. ಬಂದಿದೆ. ಮುಂದಿನ ದಿನಗಳಲ್ಲಿ ಮಂಗಳೂರು ರೈಲ್ವೆ ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂದರು.

ಶಾಸಕ ವೇದವ್ಯಾಸ ಡಿ.ಕಾಮತ್, ಮೇಯರ್ ಭಾಸ್ಕರ ಕೆ., ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನೈಋತ್ಯ ರೈಲ್ವೇ ವಿಭಾಗೀಯ ಪ್ರಬಂಧಕಿ ಅಪರ್ಣಾ ಗಾರ್ಗ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಕಬಕ ಪುತ್ತೂರು ನಿಲ್ದಾಣದಲ್ಲಿ ಪ್ಲಾಟ್ಫಾರಂ ವಿಸ್ತರಣೆ, ಬಂಟ್ವಾಳ ನಿಲ್ದಾಣದ ಪ್ಲಾಟ್‌ಫಾರಂ ವಿಸ್ತರಣೆ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಬೆಂಗಳೂರಿನಿಂದ ಮಂಗಳೂರಿಗೆ ವಾರದಲ್ಲಿ ಮೂರು ದಿನ ಸಂಚರಿಸಲಿರುವ ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News