ಏರ್ ಲಿಫ್ಟ್ ಮೂಲಕವೇ ಯೋಧರ ಸ್ಥಳಾಂತರ

Update: 2019-02-21 18:04 GMT

ಹೊಸದಿಲ್ಲಿ, ಫೆ.21: ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿರುವ ಗೃಹ ಇಲಾಖೆಯು ಯೋಧರಿಗೆ ಜಮ್ಮು-ಶ್ರೀನಗರ-ದಿಲ್ಲಿ ಮಧ್ಯೆ ವಿಮಾನ ಸಂಚಾರ ವ್ಯವಸ್ಥೆ ಕಲ್ಪಿಸುವ ಆದೇಶ ಜಾರಿಗೊಳಿಸಿದೆ.

  ದಿಲ್ಲಿ-ಶ್ರೀನಗರ, ಶ್ರೀನಗರ-ದಿಲ್ಲಿ, ಜಮ್ಮು-ಶ್ರೀನಗರದ ನಡುವಿನ ವಾಯುಮಾರ್ಗದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಕರ್ತವ್ಯಕ್ಕೆ ಹಾಜರಾಗಲು ಅಥವಾ ರಜೆ ಮೇಲೆ ತೆರಳುವಾಗ ಸಿಆರ್‌ಪಿಎಫ್ ಹಾಗೂ ಇತರ ಅರೆಸೇನಾ ಪಡೆಯ ಯೋಧರು ಇನ್ನು ಮುಂದೆ ವಿಮಾನದ ಮೂಲಕ ಪ್ರಯಾಣಿಸಬಹುದಾಗಿದೆ. ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಯೋಧರು ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ.

 ಈ ಆದೇಶದಿಂದ ಈ ಹಿಂದೆ ವಿಮಾನಪ್ರಯಾಣ ಸೌಲಭ್ಯಕ್ಕೆ ಅರ್ಹರಾಗಿರದ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಎಎಸ್‌ಐ ಸಹಿತ ಅರೆಸೇನಾಪಡೆಯ ಸುಮಾರು 7,80,000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ಕರ್ತವ್ಯದ ಸಂದರ್ಭದ ಪ್ರಯಾಣದ ಜೊತೆಗೆ ರಜೆಯ ಮೇಲೆ ಜಮ್ಮು-ಕಾಶ್ಮೀರದಿಂದ ಹುಟ್ಟೂರಿಗೆ ಮತ್ತು ಹುಟ್ಟೂರಿನಿಂದ ಜಮ್ಮು-ಕಾಶ್ಮೀರಕ್ಕೆ ಹಿಂದಿರುಗುವ ಯೋಧರಿಗೆ ಈ ಸೌಲಭ್ಯ ಅನ್ವಯಿಸಲಿದೆ ಎಂದು ಇಲಾಖೆ ತಿಳಿಸಿದೆ. ಈಗ ಯೋಧರಿಗೆ ಒದಗಿಸಲಾಗಿರುವ ಏರ್ ಕೊರಿಯರ್ ಸೇವೆಯ ಜೊತೆ ವಿಮಾನಪ್ರಯಾಣ ವ್ಯವಸ್ಥೆಯನ್ನೂ ನೀಡಲಾಗಿದೆ. ವಿಮಾನ ಪ್ರಯಾಣದಿಂದ ಸೈನಿಕರು ಊರಿಗೆ ಹೋಗಿ ಬರುವ ಪ್ರಯಾಣಾವಧಿ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News