ಎರಿಕ್ಸನ್‌ಗೆ ತುರ್ತು 260 ಕೋ.ರೂ. ನೀಡುವಂತೆ ಸಾಲದಾತರಿಗೆ ರಿಲಾಯನ್ಸ್ ಮನವಿ

Update: 2019-02-21 15:45 GMT

ಹೊಸದಿಲ್ಲಿ,ಫೆ.21: ಆದಾಯ ತೆರಿಗೆ ಮರುಪಾವತಿಯಿಂದ ಪಡೆದ 260 ಕೋಟಿ ರೂ.ವನ್ನು ತುರ್ತಾಗಿ ದೂರಸಂಪರ್ಕ ಸಂಸ್ಥೆ ಎರಿಕ್ಸನ್‌ಗೆ ನೇರವಾಗಿ ಪಾವತಿಸುವಂತೆ ರಿಲಯನ್ಸ್ ಕಮ್ಯುನಿಕೇಶನ್ಸ್ ಗುರುವಾರ ತನ್ನ ಸಾಲದಾತರಿಗೆ ಮನವಿ ಮಾಡಿದೆ.

ಎರಿಕ್ಸನ್‌ಗೆ ಬಾಕಿಯಿರುವ 453 ಕೋಟಿ ರೂ.ವನ್ನು ನಾಲ್ಕು ವಾರಗಳ ಒಳಗಾಗಿ ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯ ಬುಧವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಮನವಿಯನ್ನು ಮಾಡಿರುವುದಾಗಿ ರಿಲಾಯನ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ನ್ಯಾಯಾಲಯಕ್ಕೆ ಈಗಾಗಲೇ 118 ಕೋಟಿ ರೂ. ಪಾವತಿ ಮಾಡಲಾಗಿದ್ದು, ಎರಿಕ್ಸನ್‌ಗೆ ಬಾಕಿಯಿರುವ 550 ಕೋಟಿ ರೂ. ಮತ್ತು ಬಡ್ಡಿಯನ್ನು ನೀಡಲು ಇನ್ನು 200 ಕೋಟಿ ರೂ.ವನ್ನು ಮುಂದಿನ ನಾಲ್ಕು ವಾರಗಳ ಒಳಗೆ ಸಂಗ್ರಹಿಸುವುದಾಗಿ ರಿಲಯನ್ಸ್ ತಿಳಿಸಿದೆ. ಎರಿಕ್ಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಬುಧವಾರ ಅಂಬಾನಿ ಮತ್ತು ಇಬ್ಬರು ನಿರ್ದೇಶಕರನ್ನು ನ್ಯಾಯಾಂಗ ನಿಂದನೆಗಾಗಿ ತರಾಟೆಗೆ ತೆಗೆದುಕೊಂಡಿತು.

ಎರಿಕ್ಸನ್‌ಗೆ ಬಾಕಿಯಿರಿಸಿರುವ ಮೊತ್ತವನ್ನು ಪಾವತಿಸುವ ಇರಾದೆ ಮೂರು ರಿಲಯನ್ಸ್ ಕಂಪೆನಿಗಳಿಗೆ ಇಲ್ಲ ಎಂದು ನ್ಯಾಯಾಧೀಶರಾದ ರೊಹಿಂಟನ್ ನರಿಮನ್ ಮತ್ತು ವಿನೀತ್ ಸರನ್ ತಿಳಿಸಿದ್ದರು. ಬೇಷರತ್ ಕ್ಷಮೆಯಾಚಿಸುವ ರಿಲಯನ್ಸ್‌ನ ಮನವಿಯನ್ನೂ ಅವರು ತಿರಸ್ಕರಿಸಿದ್ದರು. ಎರಿಕ್ಸನ್‌ಗೆ ನಾಲ್ಕು ವಾರಗಳ ಒಳಗೆ 453 ಕೋಟಿ ರೂ. ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅಂಬಾನಿ ಮೂರು ವಾರಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News