ಮಹಾರಾಷ್ಟ್ರ ಸರಕಾರದ ವಿರುದ್ಧ ಅನ್ನದಾತರ ಆಕ್ರೋಶ: ಸಾವಿರಾರು ರೈತರಿಂದ ರ್ಯಾಲಿ
ಮುಂಬೈ, ಫೆ. 21: ರಾಜ್ಯ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ಸಾವಿರಾರು ರೈತರು ಗುರುವಾರ ನಾಸಿಕ್‌ನಿಂದ ಮುಂಬೈಗೆ ಪ್ರತಿಭಟನ ರ್ಯಾಲಿ ಆರಂಭಿಸಿದ್ದಾರೆ.
ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಪಿಂಚಣಿ ಅವಕಾಶ, ನೀರಾವರಿ ಸೌಲಭ್ಯ ಹಾಗೂ ಭೂಮಿ ಹಕ್ಕು ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) 8 ದಿನಗಳ ಮಾರ್ಚ್ ಆಯೋಜಿಸಿದೆ. ನಾಸಿಕ್‌ನಿಂದ ಮುಂಬೈಯವರೆಗೆ 180 ಕಿ.ಮೀ. ಅಂತರವನ್ನು ರೈತರು ಪ್ರತಿಭಟನ ರ್ಯಾಲಿ ಮೂಲಕ ಸಾಗಲಿದ್ದಾರೆ. ಫೆಬ್ರವರಿ 27ರಂದು ಮುಂಬೈ ತಲುಪಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ನಾಸಿಕ್‌ನಲ್ಲಿ ಬುಧವಾರ ಸಂಜೆ ಸೇರಿ ಅನಂತರ ಮಂತ್ರಾಲಯ, ಮುಂಬೈಯತ್ತ ರ್ಯಾಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಪೊಲೀಸರ ತಡೆಯಿಂದ ರ್ಯಾಲಿ ವಿಳಂಬವಾಗಿತ್ತು.
ನಾಸಿಕ್‌ನಲ್ಲಿ ಫೆಬ್ರವರಿ 20ರಂದು ರಾತ್ರಿ ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ ಹಾಗೂ ಎಐಕೆಎಸ್ ಪ್ರತಿನಿಧಿಗಳ ನಡುವೆ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಚಿವರು ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
ಆದರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕಳೆದ 12 ತಿಂಗಳಲ್ಲಿ ರೈತರು ನಡೆಸುತ್ತಿರುವ ಎರಡನೇ ಪ್ರತಿಭಟನೆ ಇದಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ರೈತರಿಗೆ ದ್ರೋಹ ಎಸಗಿದೆ ಎಂದು ರೈತರು ಆರೋಪಿಸಿದ್ದಾರೆ.