ತ್ರಿವಳಿ ತಲಾಖ್ ಆಧ್ಯಾದೇಶಕ್ಕೆ ರಾಷ್ಟ್ರಪತಿ ಅನುಮೋದನೆ

Update: 2019-02-21 15:54 GMT

 ಹೊಸದಿಲ್ಲಿ, ಫೆ. 21: ಮುಸ್ಲಿಂ ಪುರುಷರು ತ್ರಿವಳಿ ತಲಾಕ್ ನೀಡುವುದನ್ನು ದಂಡನೆಯ ಅಪರಾಧವೆಂದು ಪರಿಗಣಿಸುವ ತ್ರಿವಳಿ ತಲಾಕ್ ಆಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ.

 ತಲಾಕ್ ಎ ಬಿದ್ದತ್ ಅನ್ನು ರದ್ದುಗೊಳಿಸುವ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳಿಂದ ರಕ್ಷಣೆ) ಮಸೂದೆ ರಾಜ್ಯ ಸಭೆಯಲ್ಲಿ ಬಾಕಿ ಉಳಿದಿತ್ತು. ಪ್ರಸಕ್ತ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಈ ಮಸೂದೆ ಜನವರಿ 3ರಂದು ರದ್ದುಗೊಳ್ಳಲಿದೆ.

ತ್ರಿವಳಿ ತಲಾಖ್ ಆಧ್ಯಾದೇಶ ಸಹಿತ ನಾಲ್ಕು ಆಧ್ಯಾದೇಶಗಳಿಗೆ ಸಂಪುಟ ಫೆಬ್ರವರಿ 19ರಂದು ತನ್ನ ಅನುಮೋದನೆ ನೀಡಿತ್ತು.

 ಅನುಮೋದನೆಗೊಂಡ ಇತರ ಆಧ್ಯಾದೇಶಗಳಲ್ಲಿ ಕಂಪೆನಿ (ಎರಡನೇ ತಿದ್ದುಪಡಿ) ಆಧ್ಯಾದೇಶ, ಅನಿಯಂತ್ರಿತ ಠೇವಣಿ ವಿರುದ್ಧದ ಆಧ್ಯಾದೇಶ (ನಕಲಿ ಯೋಜನೆ) ಸೇರಿದೆ. ತ್ರಿವಳಿ ತಲಾಖ್ ಆಧ್ಯಾದೇಶಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಆಧ್ಯಾದೇಶವನ್ನು ಅಲ್ಪಸಂಖ್ಯಾತರ ವಿರುದ್ಧದ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ ಇದೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದರು.

ವಿರೋಧದ ಹೊರತಾಗಿಯೂ ಈ ಆಧ್ಯಾದೇಶ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಹಾಗೂ ಸಮಾನತೆ ನೀಡಲಿದೆ ಎಂದು ಕೇಂದ್ರ ಸರಕಾರ ಸಮರ್ಥಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News