ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ 3 ನದಿಗಳಿಗೆ ತಡೆ: ಗಡ್ಕರಿ

Update: 2019-02-21 16:37 GMT

ಬಾಗ್ಪತ್,ಫೆ.21: ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ಮೂರು ನದಿಗಳ ನೀರನ್ನು ತಡೆದು ಯಮುನಾ ನದಿಗೆ ಹರಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಗುರುವಾರ ತಿಳಿಸಿದ್ದಾರೆ. ಪುಲ್ವಾಮಾ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಗಡ್ಕರಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

1960ರಲ್ಲಿ ಎರಡು ದೇಶಗಳು ಸಹಿ ಹಾಕಿರುವ ದ್ವಿಪಕ್ಷೀಯ ಸಿಂಧೂ ಜಲ ಒಪ್ಪಂದದಡಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹರಿಯುವ ಆರು ನದಿಗಳ ಪೈಕಿ ತಲಾ ಮೂರು ನದಿಗಳ ಹಕ್ಕುಗಳನ್ನು ಎರಡು ದೇಶಗಳಿಗೆ ಹಂಚಲಾಗಿದೆ. ಈ ಒಪ್ಪಂದದ ಪ್ರಕಾರ, ರವಿ, ಬಿಯಾಸ್ ಮತ್ತು ಸಟ್ಲೇಜ್ ನದಿಯ ಹಕ್ಕು ಭಾರತದ್ದಾದರೆ ಝೀಲಂ, ಚೆನಬ್ ಮತ್ತು ಸಿಂಧೂ ನದಿಯ ಹಕ್ಕು ಪಾಕಿಸ್ತಾನದ ಪಾಲಾಗಿದೆ. ಪಾಕಿಸ್ತಾನಕ್ಕೆ ಹರಿಯುವ ನದಿಗಳ ಮೇಲೆ ವಿವಿಧ ಯೋಜನೆಗಳನ್ನು ಸ್ಥಾಪಿಸಲಾಗಿದೆ ಮತ್ತು ಈ ನದಿಗಳ ನೀರನ್ನು ಯಮುನಾ ನದಿಗೆ ಹರಿಸಲಾಗುವುದು. ಈ ಯೋಜನೆ ಸಂಪೂರ್ಣಗೊಂಡ ನಂತರ ಯಮುನಾ ನದಿಯಲ್ಲಿ ಹೆಚ್ಚು ನೀರಿರಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಆತ್ಮಹತ್ಯೆ ದಾಳಿ ನಡೆಸಿ 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ನಂತರ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಲು ಭಾರತ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ನದಿಯ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದನ್ನು ತಡೆಯಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News