ಪತ್ರಕರ್ತ ರವೀಶ್ ಕುಮಾರ್, ಅಭಿಸಾರ್ ಶರ್ಮರಿಗೆ ಅಶ್ಲೀಲ ಸಂದೇಶ: ತಕ್ಷಣ ಕ್ರಮಕ್ಕೆ ಕೇಂದ್ರ ಸೂಚನೆ

Update: 2019-02-21 17:19 GMT

ಹೊಸದಿಲ್ಲಿ, ಫೆ.21: ಪತ್ರಕರ್ತರಾದ ರವೀಶ್ ಕುಮಾರ್ ಹಾಗೂ ಅಭಿಸಾರ್ ಶರ್ಮರಿಗೆ ಅಶ್ಲೀಲ ಸಂದೇಶ ಕಳುಹಿಸಿದ 19 = ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಪ್ರಮುಖ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಿದೆ.

ಅಲ್ಲದೆ , ಇಂತಹ ಸಂವಹನ ಪ್ರಕ್ರಿಯೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದು ಟೆಲಿಕಾಂ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಅಶ್ಲೀಲ ಹಾಗೂ ದುರುದ್ದೇಶಪೂರಿತ ಸಂದೇಶಗಳ ವಿರುದ್ಧ ದೂರು ದಾಖಲಿಸಲು ಟೆಲಿಕಾಂ ಆಪರೇಟರ್‌ಗಳು ಹೆಲ್ಪ್‌ಲೈನ್ ಒಂದನ್ನು ಆರಂಭಿಸಬೇಕು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಡೆಹ್ರಾಡೂನ್ ಕ್ಷೇತ್ರ ಕಚೇರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಪುಲ್ವಾಮದ ಭಯೋತ್ಪಾದಕ ದಾಳಿಯ ತರುವಾಯ ತಮಗೆ ವಾಟ್ಸಪ್ ಮತ್ತು ಟ್ವಿಟರ್ ಮೂಲಕ ಹಲವರಿಂದ ಬೆದರಿಕೆ ಕರೆ ಮತ್ತು ಸಂದೇಶಗಳು ಬರುತ್ತಿವೆ ಎಂದು ಹಲವು ಪತ್ರಕರ್ತರು ದೂರು ನೀಡಿದ್ದಾರೆ. ಪತ್ರಕರ್ತರಾದ ಕುಮಾರ್ ಮತ್ತು ಶರ್ಮರಿಗೆ ಬಂದಿರುವ ಸಂದೇಶದ ಸ್ಕ್ರೀನ್ ಶಾಟ್‌ಗಳನ್ನು ಸೂಚನೆಯೊಂದಿಗೆ ಲಗತ್ತಿಸಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯ, ರಿಲಯನ್ಸ್ ಜಿಯೊ, ಏರ್‌ಸೆಲ್, ಎಂಟಿಎಂಎನ್‌ಎಲ್, ಬಿಎಸ್ಸೆನ್ನೆಲ್, ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಟೆಲಿಕಾಂ ಮತ್ತು ಟಾಟಾ ಟೆಲಿಸರ್ವಿಸಸ್ ಸಂಸ್ಥೆಗೆ ಕಳುಹಿಸಲಾಗಿದೆ. ಅಲ್ಲದೆ ಸೂಚನಾಪತ್ರದ ಪ್ರತಿಯನ್ನು ರಾಜ್ಯದ ಪೊಲೀಸ್ ಮುಖ್ಯಸ್ಥರು ಹಾಗೂ ಕೇಂದ್ರ ಸರಕಾರದ ಟೆಲಿಕಮ್ಯುನಿಕೇಷನ್ಸ್ ಇಲಾಖೆಗೆ ರವಾನಿಸಲಾಗಿದೆ.

 ಕ್ರಮ ಕೈಗೊಂಡಿರುವ ಕುರಿತು 15 ದಿನದಲ್ಲಿ ವರದಿ ನೀಡುವಂತೆ ಸಚಿವಾಲಯ ತಿಳಿಸಿದೆ. ಅಲ್ಲದೆ ಅಶ್ಲೀಲ, ಅಸಭ್ಯ, ದುರುದ್ದೇಶಪೂರಿತ ಸಂವಹನ ಪ್ರಕ್ರಿಯೆ ಪ್ರಸಾರವಾದರೆ ಅದಕ್ಕೆ ಟೆಲಿಕಾಂ ಸಂಸ್ಥೆಗಳೇ ಜವಾಬ್ದಾರರು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಟೆಲಿಕಾಂ ಸಂಪರ್ಕಜಾಲವನ್ನು ಇಂತಹ ಕ್ರಿಯೆಗೆ ಬಳಸುವುದು ಮೊಬೈಲ್ ಸಂಪರ್ಕ ಪಡೆಯುವಾಗ ಗ್ರಾಹಕರು ಸಹಿ ಹಾಕುವ ಅರ್ಜಿ ಫಾರಂನ ಉಲ್ಲಂಘನೆಯಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News