ಫೋರ್ಜರಿ ಪ್ರಕರಣದಲ್ಲಿ ವಿಶ್ವಭಾರತಿಯ ಮಾಜಿ ಕುಲಪತಿ ಸೇರಿದಂತೆ ಮೂವರು ತಪ್ಪಿತಸ್ಥರು

Update: 2019-02-21 17:23 GMT

ಬೋಲಪುರ(ಪ.ಬಂ): ವಿಶ್ವಭಾರತಿ ವಿವಿಯ ಮಾಜಿ ಕುಲಪತಿ ದಿಲೀಪ್  ಕುಮಾರ್ ಸಿನ್ಹಾ,ರಿಜಿಸ್ಟ್ರಾರ್ ದಿಲೀಪ ಮುಖ್ಯೋಪಾಧ್ಯಾಯ ಮತ್ತು ಗಣಿತ ಶಿಕ್ಷಕಿ ಮುಕ್ತಿ ದೇವ್ ಅವರು ಫೋರ್ಜರಿ ಮತ್ತು ಕ್ರಿಮಿನಲ್ ಸಂಚು ಪ್ರಕರಣದಲ್ಲಿ ಅಪರಾಧಿಗಳಾಗಿದ್ದಾರೆ ಎಂದು ಇಲ್ಲಿಯ ನ್ಯಾಯಾಲಯವು ಘೋಷಿಸಿದೆ.

ಫೋರ್ಜರಿ ಆರೋಪದಲ್ಲಿ ವಿವಿಯ ಮಾಜಿ ಕುಲಪತಿಯೋರ್ವರು ಶಿಕ್ಷೆಗೆ ಗುರಿಯಾಗುತ್ತಿರುವುದು ಇದೇ ಪ್ರಥಮವಾಗಿದೆ.

2004ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಅದಾಗಲೇ ಸಿನ್ಹಾ ಅವರು ನಿವೃತ್ತರಾಗಿದ್ದರು ಮತ್ತು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.

ದೇವ್ ಅಗತ್ಯ ವಿದ್ಯಾರ್ಹತೆಗಳಿಲ್ಲದೆ ಆರು ವರ್ಷಗಳ ಕಾಲ ವಿವಿಯಲ್ಲಿ ಗಣಿತದ ಲೆಕ್ಚರರ್ ಆಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು.

ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಆಕೆ 1997ರಲ್ಲಿ ನಕಲಿ ದಾಖಲೆಗಳ ಫೋಟೊಪ್ರತಿಗಳನ್ನು ಸಲ್ಲಿಸಿ ವಿಶ್ವಭಾರತಿ ವಿವಿಯಲ್ಲಿ ಬೋಧಕಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಈ ಫೋಟೊಪ್ರತಿಗಳನ್ನು ಆಗ ವಿವಿಯ ಕುಲಪತಿಗಳಾಗಿದ್ದ ಸಿನ್ಹಾ ದೃಢೀಕರಿಸಿದ್ದರು.

2001ರಲ್ಲಿ ಸಿನ್ಹಾರ ನಿವೃತ್ತಿಯ ಬಳಿಕ 2004ರಲ್ಲಿ ದೇವ್‌ಗೆ ಶೋಕಾಸ್ ನೋಟಿಸ್ ನೀಡಿದ್ದ ವಿವಿಯ ಕಾರ್ಯಕಾರಿ ಮಂಡಳಿಯು ನಂತರ ಅಮಾನತುಗೊಳಿಸಿ,ಅಂತಿಮವಾಗಿ ಕೆಲಸದಿಂದ ವಜಾಗೊಳಿಸಿತ್ತು.

2004ರಲ್ಲಿ ಸಿನ್ಹಾರನ್ನು ಬಂಧಿಸಲಾಗಿತ್ತಾದರೂ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News