ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ವಿಚಾರಣೆ

Update: 2019-02-21 17:58 GMT

ಹೊಸದಿಲ್ಲಿ, ಫೆ. 21: ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿ ತಡೆಯಲು ಹಸ್ತಕ್ಷೇಪ ನಡೆಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ.

ಹಿರಿಯ ನ್ಯಾಯವಾದಿ ಕಾಲಿನ್ ಗೊನ್ಸಾಲ್ವೆಸ್ ಈ ವಿಷಯವನ್ನು ಗುರುವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಮುಂದೆ ಉಲ್ಲೇಖಿಸಿದ್ದರು ಹಾಗೂ ಅಪರಾಹ್ನ 2 ಗಂಟೆಗೆ ವಿಚಾರಣೆ ನಡೆಸುವಂತೆ ಕೋರಿದರು. ಆದಾಗ್ಯೂ, ನ್ಯಾಯಮೂರ್ತಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.

ನ್ಯಾಯವಾದಿ ತಾರಿಕ್ ಅದೀಬ್ ಅವರು ಮನವಿ ಸಲ್ಲಿಸಿದ್ದರು. ಫೆಬ್ರವರಿ 14ರಂದು ನಡೆದ ದಾಳಿಯಲ್ಲಿ ಸಿಆರ್‌ಪಿಎಫ್ ‌ನ 40 ಮಂದಿ ಯೋಧರು ಹುತಾತ್ಮರಾದ ಬಳಿಕ ಡೆಹ್ರಾಡೂನ್ ಹಾಗೂ ಉತ್ತರಾಖಂಡದಲ್ಲಿ ಗುಂಪು ಹಿಂಸಾಚಾರದಿಂದ ರಕ್ಷಿಸಿಕೊಳ್ಳಲು ಕಾಶ್ಮೀರಿ ವಿದ್ಯಾರ್ಥಿಗಳು ಹೊರಗೆ ಇಳಿಯಲಿಲ್ಲ ಎಂದು ಮನವಿ ಹೇಳಿದೆ.

ಕಾಶ್ಮೀರಿಗಳು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ದಾಳಿ, ಅವರಿಗೆ ಸಾಮಾಜಿಕ ಬಹಿಷ್ಕಾರ, ತೆರವುಗೊಳಿಸುವುದು ಹಾಗೂ ಇತರ ದಬ್ಬಾಳಿಕೆ ತಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಹಿತ ಸಂಬಂಧಿಸಿದ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು. ಕಾಶ್ಮೀರಿಗಳನ್ನು ಗುರಿಯಾಗಿಸಿ ದಾಳಿ ನಡೆಸುವವರು ಹಾಗೂ ದ್ವೇಷಪೂರಿತ ಭಾಷಣದಲ್ಲಿ ತೊಡಗಿರುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಹೇಳಿದೆ. ಹಲ್ಲೆಯ ಘಟನೆಗಳನ್ನು ತಡೆಯಲು ಹಾಗೂ ಇದರಲ್ಲಿ ಭಾಗಿಯಾಗಿರುವರ ವಿಚಾರಣೆ ನಡೆಸಲು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿರಿಯ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News