ಫೆ.23ರಿಂದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸಮಾವೇಶ: ಮುಫ್ತಿ ಬಾಖರ್ ಅರ್ಶದ್

Update: 2019-02-21 18:40 GMT

ಬೆಂಗಳೂರು, ಫೆ.21: ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಬೆಂಗಳೂರು ಹಾಗೂ ಮೈಸೂರು ಕಂದಾಯ ವಿಭಾಗದ 17 ಜಿಲ್ಲೆಗಳ ಪದಾಧಿಕಾರಿಗಳ ಸಮಾವೇಶವನ್ನು ಫೆ.23 ಹಾಗೂ 24ರಂದು ನಗರದ ಕಲಾಸಿಪಾಳ್ಯದಲ್ಲಿರುವ ಹೊಟೇಲ್ ತೈಬಾದಲ್ಲಿ ಆಯೋಜಿಸಲಾಗಿದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಜ್ಯಾಧ್ಯಕ್ಷ ಮುಫ್ತಿ ಬಾಖರ್ ಅರ್ಶದ್ ತಿಳಿಸಿದರು.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳ ಕುರಿತು ಈ ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು ಎಂದರು.
ದೇಶದ ಮುಂದಿರುವ ಸವಾಲುಗಳು, ಮುಂದಿನ ಚುನಾವಣೆಯಲ್ಲಿ ಕೋಮುವಾದವನ್ನು ಪ್ರೋತ್ಸಾಹಿಸುವ ಸರಕಾರ ಬೇಕೆ ಅಥವಾ ಜಾತ್ಯತೀತವಾದವನ್ನು ಎತ್ತಿಹಿಡಿಯುವ ಸರಕಾರ ಬೇಕೇ ಎಂಬುದನ್ನು ಮತದಾರರು ನಿರ್ಧರಿಸಬೇಕಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಸಮುದಾಯಗಳು, ಹಿಂದುಳಿದ ವರ್ಗಗಳು, ಆದಿವಾಸಿಗಳು, ದಲಿತರ ಹಕ್ಕುಗಳಿಗೂ ಮಿಲ್ಲಿ ಕೌನ್ಸಿಲ್ ಕಳೆದ 27 ವರ್ಷಗಳಿಂದ ಹೋರಾಡುತ್ತಿದೆ. ಮಿಲ್ಲಿ ಕೌನ್ಸಿಲ್ ಯಾವುದೋ ಒಂದು ಸಂಘಟನೆಯಲ್ಲ, ಇದೊಂದು ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.

ಜನವರಿ ತಿಂಗಳಿನಲ್ಲಿ ಗುಲ್ಬರ್ಗ ಹಾಗೂ ಬೆಳಗಾವಿ ವಿಭಾಗದ 13 ಜಿಲ್ಲೆಗಳ ಎರಡು ದಿನಗಳ ಸಮಾವೇಶವನ್ನು ನಡೆಸಲಾಗಿತ್ತು. ವಿವಿಧ ಗೋಷ್ಠಿಗಳನ್ನು ನಡೆಸಿ, ಮಿಲ್ಲಿ ಕೌನ್ಸಿಲ್‌ನ ಪದಾಧಿಕಾರಿಗಳಿಗೆ ಯಾವ ರೀತಿಯ ಕೆಲಸವನ್ನು ಸ್ಥಳೀಯಮಟ್ಟದಲ್ಲಿ ಕೆಲಸ ಮಾಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ಬಾಖರ್ ಅರ್ಶದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೌಲಾನ ಮುಸ್ತಫಾ ರಿಫಾಯಿ, ರಾಜ್ಯ ಉಪಾಧ್ಯಕ್ಷ ಸುಲೇಮಾನ್, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಶಾಹಿದ್ ಅಹ್ಮದ್, ಜಮೀಲ್ ಅಹ್ಮದ್, ಅಫ್ಸರ್ ಖಾದ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News