ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರ ದಟ್ಟಣೆಯಲ್ಲಿ ವಿಶ್ವದ ಟಾಪ್ 3 ಸ್ಥಾನಕ್ಕೇರಲಿ: ರಾಜ್ಯಪಾಲ ಆಶಯ

Update: 2019-02-22 11:55 GMT

ಮಂಗಳೂರು, ಫೆ. 22: ಅತ್ಯುತ್ತಮ ಗುಣಮಟ್ಟದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಂ. 1 ಸ್ಥಾನದಲ್ಲಿದೆ. ಪ್ರಯಾಣಿಕರ ದಟ್ಟಣೆ ಯಲ್ಲಿ ವಿಶ್ವದಲ್ಲಿ 31ನೆ ಸ್ಥಾನದಲ್ಲಿದ್ದು, ಟಾಪ್ 3ಕ್ಕೆ ಏರುವಲ್ಲಿ ಪ್ರಯತ್ನ ಆಗಬೇಕಾಗಿದೆ ಎಂದು ರಾಜ್ಯಪಾಲ ವಾಜುಬಾಯಿ ರೂಢಾಬಾಯಿವಾಲ ಆಶಯ ವ್ಯಕ್ತಪಡಿಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಟರ್ಮಿನಲ್ ಕಟ್ಟಡ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಪ್ರಯಾಣಿಕರ ಆಗಮನ ಮತ್ತು ನಿರ್ಗಮನ ಸೇತುವೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಜನತೆಯ ಶಾಂತಿ ಮತ್ತು ಸಂಯಮದಿಂದಾಗಿ ಮಂಗಳೂರು ನಗರ ವ್ಯಾಪಾರ ಕೇಂದ್ರವಾಗಿ ಬೆಳೆದಿದೆ. ಈ ವ್ಯಾಪಾರವು ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಒತ್ತು ನೀಡಿರುವುದರಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸೌಲಭ್ಯವನ್ನು ಕೂಡಾ ಕಲ್ಪಿಸುವ ಕಾರ್ಯ ನಡೆದಿದೆ. ಕೇರಳ ರಾಜ್ಯದ ಬಹುಭಾಗದ ಪ್ರಯಾಣಿಕರು ಕೂಡಾ ಈ ವಿಮಾನ ನಿಲ್ದಾಣವನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಣ್ಣೂರು ವಿಮಾನ ನಿಲ್ದಾಣದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಆತಂಕ ಬೇಡ ಎಂದರು.

ಮಂಗಳೂರು ವಿಮಾನ ನಿಲ್ದಾಣದಿಂದ ಪುಣೆಗೆ ನೇರ ವಿಮಾನ ಹಾಗೂ ಹೊಸದಿಲ್ಲಿ ಹಾಗೂ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಯಾನಕ್ಕೆ ಒತ್ತಾಯಿಸಲಾಗಿದೆ. ರಾಜ್ಯ ಸರಕಾರ 84 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿ ನೀಡಿದ್ದಲ್ಲಿ ರನ್‌ವೇ ವಿಸ್ತರಣೆ ಕಾರ್ಯ ಆರಂಭವಾಗಲಿದೆ. ಇದೇ ವೇಳೆ ಗುರುಪುರ ಸೇತುವೆಯಿಂದ ಏರ್‌ಪೋರ್ಟ್ ರಸ್ತೆಯನ್ನು ಏಕಪಥದಿಂದ ದ್ವಿಪಥಗೊಳಿಸುವುದು, ಕೆಂಜಾರು ರೈಲು ನಿಲ್ದಾಣದಿಂದ ಏರ್‌ಪೋರ್ಟ್‌ಗೆ ಸಂಪರ್ಕ ರಸ್ತೆ ಕಲ್ಪಿಸುವಂತೆಯೂ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರು ಹೊಸದಿಲ್ಲಿಯಲ್ಲಿ ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳ ವಿಮಾನ ನಿಲ್ದಾಣಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಬೃಹತ್ ಪರದೆಯಲ್ಲಿ ನೇರವಾಗಿ ವೀಕ್ಷಿಸುವ ವ್ಯವಸ್ಥೆಯನ್ನು ಕಾರ್ಯಕ್ರಮದಲ್ಲಿ ಮಾಡಲಾಗಿತ್ತು.

ವೇದಿಕೆಯಲ್ಲಿ ಮೇಯರ್ ಭಾಸ್ಕರ್ ಕೆ., ಶಾಸಕ ಉವಾನಾಥ ಕೋಟ್ಯಾನ್ ಉಪಸ್ಥಿತರಿದ್ದರು. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್ ಸ್ವಾಗತಿಸಿ, ವಂದಿಸಿದರು. ಸೌಜನ್ಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ 132.24 ಕೋಟಿ ರೂ. ವೆಚ್ಚದಲ್ಲಿ 11,343 ಚದರ ಮೀಟರ್ ಹೆಚ್ಚುವರಿ ಟರ್ಮಿನಲ್ ನಿರ್ಮಾಣವು 2020ರ ಎಪ್ರಿಲ್‌ನೊಳಗೆ ಪೂರ್ಣಗೊಳ್ಳಲಿದೆ. ಇದರಿಂದಾಗಿ ಪ್ರಸ್ತುತ ವಾರ್ಷಿಕ 2 ಮಿಲಿಯನ್ ಪ್ರಯಾಣಿಕರ ನಿರ್ವಹಣೆಯು 3 ಮಿಲಿಯನ್ ಗೆ ಏರಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News