ಹಿರಿಯಡ್ಕ: ನೀರಿನ ಹಕ್ಕಿಗಾಗಿ ಕೃಷಿಕರಿಂದ ಬಜೆ ಅಣೆಕಟ್ಟಿಗೆ ಮುತ್ತಿಗೆ

Update: 2019-02-22 12:01 GMT

ಹಿರಿಯಡ್ಕ, ಫೆ. 22: ಹಿರಿಯಡ್ಕ ಸ್ವರ್ಣನದಿ ತೀರದ ಕೃಷಿಕರ ವಿದ್ಯುತ್ ಪಂಪ್‌ಗಳ ಸಂಪರ್ಕ ಕಡಿತ ಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಶುಕ್ರವಾರ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್, ಫೆ.1ರಿಂದ ಕೃಷಿಕರ ವಿದ್ಯುತ್ ಪಂಪ್‌ಗಳ ವಿದ್ಯುತ್‌ನ್ನು ನಿಲುಗಡೆಗೊಳಿಸಿದ ಪರಿಣಾಮ ಅನಾದಿ ಕಾಲದಿಂದಲೂ ಹಿರಿಯಡ್ಕ ಸ್ವರ್ಣ ನದಿ ತೀರದಲ್ಲಿ ಕೃಷಿ ಮಾಡಿಕೊಂಡಿರುವ ರೈತರ ಕೃಷಿ ಬೆಳೆಗಳು ಕಳೆದ 22 ದಿನಗಳಿಂದ ನೀರಿಲ್ಲದೆ ನಾಶವಾಗುತ್ತಿವೆ ಎಂದು ಆರೋಪಿಸಿದರು.

ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ/ಲಭ್ಯತೆಗೆ ಅನುಗುಣವಾಗಿ ಮಾರ್ಚ್- ಎಪ್ರಿಲ್ ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ಮತ್ತು ಮೇ ತಿಂಗಳಲ್ಲಿ ವಾರಕ್ಕೆ ಒಂದು ಬಾರಿಯಂತೆ ಹಿರಿಯಡ್ಕ ನದಿ ತೀರದ ಕೃಷಿಕರಿಗೆ ಕೃಷಿಗೆ ನೀರು ಹರಿ ಸಲು ಜಿಲ್ಲಾಡಳಿತ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಮುಂದೆ ಸಂಭವಿಸುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಅವರು ಎಚ್ಚರಿಕೆ ನೀಡಿದರು.

ರೈತರ ಪಂಪ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿದರೂ ಡಿಸೇಲ್ ಪಂಪ್ ಮೂಲಕ ನೀರು ಎತ್ತಿ ಕೃಷಿ ಉಳಿಸುವ ಕೆಲಸ ಮಾಡಲಾಗುವುದು. ಮಾರ್ಚ್ ಎಪ್ರಿಲ್‌ನಲ್ಲಿ ವಾರಕ್ಕೆ ಎರಡು ಬಾರಿ ಹಾಗೂ ಮೇ ನಲ್ಲಿ ಒಂದು ಬಾರಿ ನೀರು ತೆಗೆಯಲು ಅವಕಾಶ ನೀಡಬೇಕು. ನೀರಿನ ಅಭಾವ ಇದ್ದಾಗ ನಾವು ಹಂಚಿ ನೀರು ತೆಗೆಯುತ್ತೇವೆ. ನಾವು ವಾರದಲ್ಲಿ ಎರಡು ದಿನ ನೀರು ತೆಗೆದರೆ, ನಗರಸಭೆ ಎರಡು ದಿನ ನೀರು ತೆಗೆಯುವುದನ್ನು ಸ್ಥಗಿತಗೊಳಿಸಬೇಕು. ಈ ಕಾನೂನನ್ನು ಜಿಲ್ಲಾಡಳಿತ ಅನುಷ್ಠಾನಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಕರಾವಳಿಯಲ್ಲಿ ಅಳಿವಿನಂಚಿನಲ್ಲಿರುವ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ರೈತರಿಗೆ ಸವಲತ್ತುಗಳನ್ನು ನೀಡಬೇಕೆ ಹೊರತು ಅವರ ನೀರಿನ ಹಕ್ಕನ್ನು ಕಸಿದು ಕೊಳ್ಳುವ ಕೆಲಸ ಮಾಡಬಾರದು. ಮುಂದೆ ನಮ್ಮ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲು ನಾವು ಬಿಡುವುದಿಲ್ಲ. ನೀರಿನ ಹಕ್ಕಿಗಾಗಿ ರೈತರು ಹಿಂಸೆ ಇಳಿಯಲು ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದು ಅವರು ತಿಳಿಸಿದರು.

ಈ ಕುರಿತ ಮನವಿಯನ್ನು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಮುಖಂಡರಾದ ಉದಯ ಭಟ್, ವೇದವ್ಯಾಸ ಆಚಾರ್ಯ, ಭಾರತಿ ಶೆಟ್ಟಿ ಅಂಜಾರು, ಪಿ.ಹಮೀದ್ ಪುತ್ತಿಗೆ, ಸರ್ವತ್ತೋಮ ಶೆಟ್ಟಿ, ಸುಂದರ ಭಂಡಾರಿ, ಚೇರ್ಕಾಡಿ ಸುಕುಮಾರ್ ಶೆಟ್ಟಿ, ಸುರೇಶ್ ನಾಯಕ್, ಶ್ರೀನಿವಾಸ ಪೂಜಾರಿ ಅಂಜಾರು ಮೊದಲಾದವರು ಉಪಸ್ಥಿತರಿದ್ದರು.

‘ಅಧಿಕಾರಿಗಳನ್ನು ಹಿಮ್ಮೆಟ್ಟಿಸುತ್ತೇವೆ’

ನದಿ ನೀರನ್ನು ಹಂಚಿ ಉಪಯೋಗಿಸುತ್ತೇವೆ ಎಂಬ ನಿಯಮವನ್ನು ರೈತರೆಲ್ಲ ಸೇರಿ ಈಗಾಗಲೇ ಮಾಡಿದ್ದೇವೆ. ಇದಕ್ಕೆ ವಿರುದ್ಧವಾಗಿ ಯಾವುದೇ ಅಧಿಕಾರಿ ನಮ್ಮ ಕೃಷಿ ಭೂಮಿಗೆ ಕಾಲಿಟ್ಟರೆ ರೈತರೆಲ್ಲ ಒಗ್ಗಟ್ಟಾಗಿ ಅವರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ ಎಂದು ರಾಮಕೃಷ್ಣ ಶರ್ಮ ಎಚ್ಚರಿಕೆ ನೀಡಿದರು.

ಫೆ.1ರಿಂದ ಕಡಿತ ಮಾಡಿರುವ ರೈತರ ವಿದ್ಯುತ್ ಸಂಪರ್ಕವನ್ನು ಸಂಜೆಯೊಳಗೆ ನೀಡದಿದ್ದರೆ ಮೆಸ್ಕಾಂ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು. ಈ ಮಧ್ಯೆ ರೈತರು ನೀರೆತ್ತುವ ಕೆಲಸ ಮಾಡುವಾಗ ಯಾವುದೇ ರೀತಿಯ ವಿದ್ಯುತ್ ಅನಾಹುತ ಸಂಭವಿಸಿದರೆ ಅದಕ್ಕೆ ಮೆಸ್ಕಾಂನವರೇ ನೇರ ಜವಾಬ್ದಾರ ರಾಗುತ್ತಾರೆ ಎಂದರು.

2.36 ಕೋಟಿ ಕೃಷಿಸಾಲ

ಹಿರಿಯಡ್ಕ ಸ್ವರ್ಣ ನದಿ ತೀರ ಪ್ರದೇಶದಲ್ಲಿ 950 ಮಂದಿ ಕೃಷಿಕರು ಹಾಗೂ 450 ಮಂದಿ ಕೃಷಿ ಕಾರ್ಮಿಕರು ಸುಮಾರು 650 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. 300 ಎಕರೆ ತೆಂಗು, 120 ಎಕರೆ ಅಡಿಕೆ, 50 ಎಕರೆ ಬಾಳೆ, 10 ಎಕರೆ ತರಕಾರಿ, 200 ಎಕರೆ ಭತ್ತ ಬೆಳೆಸುತ್ತಿದ್ದಾರೆ. ಇಲ್ಲಿ ಕೃಷಿ ಉತ್ಪಾದನಾ ವೆಚ್ಚ 12ಕೋಟಿ ರೂ. ಇದ್ದು, 2.36 ಕೋಟಿ ರೂ. ಸಾಲ ಇದೆ. ಕಡು ಬೇಸಿಗೆಯಲ್ಲಿ ಭೂ ತೇವಾಂಶ ಕಾಯ್ದುಕೊಳ್ಳುವಷ್ಟು ನೀರು ಹರಿಸದಿದ್ದರೆ ಕೃಷಿ ಕೈಕೊಟ್ಟು ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News